ಸೌಂದತ್ತಿ

ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ರಸ್ತೆ ತಡೆ ಪ್ರತಿಭಟನೆ ಶಾಸಕ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟು ಬಿಡಾರ

ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ರಸ್ತೆ ತಡೆ ಪ್ರತಿಭಟನೆ ಶಾಸಕ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟು ಬಿಡಾರ

ಸವದತ್ತಿ 20: ರೈತರಿಗೆ ಅರೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಅಂದು ನಿರ್ಮಿಸಿರುವ ಮಲಪ್ರಭಾ ಆಣೆಕಟ್ಟಿನ ಉದ್ದೇಶ ಈಗ ಸಂಪೂರ್ಣ ಬದಲಾಗುತ್ತ ಸಾಗಿದ್ದು, ಮಲಪ್ರಭಾ ಯೋಜನೆಯು ಇದು ಕೇವಲ ಕುಡಿಯುವ ನೀರಿನ ಯೋಜನೆಯಲ್ಲ ಇದು ಅರೆ ನೀರಾವರಿ ಯೋಜನೆಯಾಗಿದೆ ಎಂದು ರೈತಪರ ಹೋರಾಟಗಾರ ವಿಜಯ ಕುಲಕರ್ಣಿ ಹೇಳಿದರು. 

ತಾಲೂಕಿನಲ್ಲಿ ಸರಿಯಾಗಿ ಮಳೆಯಾಗದೆ ಬೆಳೆಗಳು ನಾಶವಾಗುತ್ತಿದ್ದು, ಜನ ಮತ್ತು ಜಾನುವಾರುಗಳಿಗೆ ನೀರಿನ ಅವಶ್ಯಕತೆಯಿರುವದರಿಂದ ಕೂಡಲೇ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಬುಧವಾರದಂದು ಕಗದಾಳ, ಹರಳಕಟ್ಟಿ, ಆಚಮಟ್ಟಿ, ಚುಳಕಿ, ಶಿರಸಂಗಿ, ಹೂಲಿಕಟ್ಟಿ, ಹಂಚನಾಳ, ಚಿಕ್ಕುಂಬಿ ಹಾಗೂ ಸಂಬಂಧಪಟ್ಟ ವಿವಿಧ ಗ್ರಾಮಗಳ ರೈತರು ಮಲಪ್ರಭಾ ಬಲದಂಡೆ ಕಾಲುವೆಯ ಜಾಕ್‌ವೆಲ್ ಹತ್ತಿರ ಗೋಕಾಕ ಧಾರವಾಡ ಮುಖ್ಯ ರಸ್ತೆ ಬಂದ್ ಮಾಡಿ ಹಮ್ಮಿಕೊಂಡ ಉಗ್ರ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ನೀರು ಪೂರೈಕೆ ಮಾಡುವಲ್ಲಿ ಸರಕಾರಗಳು ಮಲತಾಯಿ ಧೋರಣೆ ತೋರುವ ಮೂಲಕ ರೈತರನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸರಕಾರಗಳು ರೈತರ ಸಂಕಷ್ಟಗಳಿಗೆ ಸ್ಪಂಧನೆ ನೀಡುವ ಮೂಲಕ ಒಣಗುತ್ತಿರುವ ಬೆಳೆಗಳಿಗೆ ಕನಿಷ್ಠ ಒಂದು ನೀರನ್ನಾದರೂ ನೀಡಿ ರೈತರ ಕಷ್ಟಗಳಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು. ರೈತರ ಬೇಡಿಕೆಗೆ ತಕ್ಷಣ ಸ್ಪಂಧನೆ ನೀಡದೆ ಹೋದಲ್ಲಿ ಮುಂದಿನ ಕೆಟ್ಟ ಪರಿಣಾಮವನ್ನು ಸರಕಾರವು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಶಾಸಕ ವಿಶ್ವಾಸ ವೈದ್ಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಗೆ ಸ್ಪಂಧನೆ ನೀಡುತ್ತಾ ಮಾತನಾಡಿ, ಸಂಧಿಗ್ದ ಪರಸ್ಥಿತಿಯಲ್ಲಿರುವ ರೈತರ ಜಮೀನು ಮತ್ತು ಜಾನುವಾರುಗಳಿಗೆ ಕಾಲುವೆ ಮುಖಾಂತರ ತಕ್ಷಣ ನೀರು ಬಿಡುವ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಈಗಾಗಲೆ ಮಾತನಾಡಲಾಗಿದೆ ಎಂದರು. ಮಲಪ್ರಭಾ ಆಣೆಕಟ್ಟೆಯಲ್ಲಿ ಈಗ 21 ಟಿಎಮ್‌ಸಿ ನೀರು ಸಂಗ್ರಹವಿದ್ದು, ಅದರಲ್ಲಿ 3 ಟಿಎಮ್‌ಸಿ ಡೆಡ್ ಸ್ಟೋರೇಜ ಇರುವದರಿಂದ 18 ಟಿಎಮ್‌ಸಿ ನೀರನ್ನು ನಾವು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು. ಇದರಲ್ಲಿ ಕುಡಿಯುವದಕ್ಕಾಗಿ ಅತಿ ಹೆಚ್ಚು ಅಂದರೆ 14 ಟಿಎಮ್‌ಸಿ ನೀರನ್ನು ಬರುವಂತ ಜುಲೈದವರೆಗೆ ನಾವು ಬಳಕೆ ಮಾಡಬಹುದಾಗಿದೆ. ಇನ್ನುಳಿದ 4 ಟಿಎಮ್‌ಸಿ ನೀರನ್ನು ರೈತರಿಗೆ ಸಾಧ್ಯತೆಯ ಮೇಲೆ ಕಾಲುವೆಗಳಿಗೆ ಬಿಡಲು ಅವಕಾಶವಿರುವದರಿಂದ ರೈತರು ಚಿಂತಿಸುವ ಅಗತ್ಯವಿಲ್ಲ ಎಂದರು. ತಮ್ಮ ಭಾಗದ ಕಾಲುವೆಗಳಿಗೆ ತಕ್ಷಣ ನೀರು ಬಿಡುವಂತ ವ್ಯವಸ್ಥೆಯನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು. ಕಾಲುವೆಗೆ ನೀರು ಹರಿಸಲು ಕೆಲವೊಂದು ನಿಯಮಾವಳಿಗಳನ್ನು ಪಾಲನೆ ಮಾಡಬೇಕಿರುವದರಿಂದ ಅದನ್ನು ಸಭೆಯಲ್ಲಿ ಚರ್ಚಿಸಿ ಯಾವುದೆ ಪರಸ್ಥಿತಿಯಲ್ಲಿ ಇಂದು ಕಾಲುವೆಗೆ ನೀರು ಬಿಡುವಂತ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಾಗದೆ ಹೋದರೆ ನಾನು ಸಹಿತ ತಮ್ಮ ಜೊತೆಗೆ ಹೋರಾಟಕ್ಕೆ ಇಳಿಯುವದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಸಹಕಾರ ನೀಡಿ  ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ತಡೆಯನ್ನು ಸ್ಥಗಿತಗೊಳಿಸಿ ಶಾಂತ ರೀತಿಯಿಂದ ಇರಬೇಕೆಂದು ಮನವಿ ಮಾಡಿದರು. 

ಶಾಸಕರ ಮನವಿಗೆ ಸ್ಪಂದಿಸಿದ ರೈತರು ರಸ್ತೆ ತಡೆಯ ಪ್ರತಿಭಟನೆಯಿಂದ ಹಿಂದೆ ಸರಿದು ಸಾಯಂಕಾಲ ನೀರು ಬಿಡುವವರೆಗೆ ಬಲದಂಡೆ ಕಾಲುವೆ ಹತ್ತಿರ ಶಾಂತರೀತಿಯಿಂದ ಬಿಡಾರ ಹೂಡುವದಾಗಿ ಹೇಳಿದರು. 

ಎಮ್‌ಆರ್‌ಬಿಸಿಸಿ ಧಾರವಾಡದ ಸುಪ್ರಿಟೆಂಡ್ ಅಭಿಯಂತರ ಎಸ್‌.ಐ.ಮಲ್ಲಿಗವಾಡ ಮಾತನಾಡಿ, ಧಾರವಾಡದ ವಲಯದಲ್ಲಿ ಪ್ರಮುಖವಾಗಿ 5 ಏತ ನೀರಾವರಿ ಯೋಜನೆಗಳು ಬರುತ್ತಿದ್ದು, ರೈತರ ಬೇಡಿಕೆಯಂತೆ ಸಭೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. 

ರೈತ ಪರ ಹೋರಾಟಗಾರರಾದ ಶಂಕರ ಅಂಬಲಿ, ಶ್ರೀಶೈಲ್ ಕೌಜಗೇರಿ, ಸುರೇಶ ಸಂಪಗಾವಿ, ಕೃಷ್ಣಾ ರಡ್ಡಿ, ಬಸನಗೌಡ ಪಾಟೀಲ, ಜಿ.ಎಸ್‌.ಗಂಗಲ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಡಿಎಸ್‌ಪಿ ರಾಮನಗೌಡ ಹಟ್ಟಿ ಹಾಗೂ ಪಿಐ ಕರುಣೇಶಗೌಡ ನೇತೃತ್ವದಲ್ಲಿ ಸೂಕ್ತ ಬಂದೂಬಸ್ತ ವ್ಯವಸ್ಥೆ ಮಾಡಲಾಗಿತ್ತು. 


ಸುದ್ದಿ ಓದಿ