ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚ್ಯಾರ ಖಂಡಿಸಿ ಪ್ರತಿಭಟನೆ
ವಿಜಯನಗರ 23: ದಿ. 22 ರಂದು ಶನಿವಾರ ಹೊಸಪೇಟೆಯ ತಹಶಿಲ್ದಾರರ ಕಛೇರಿಯ ಎದುರು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಯುವಜನ ಸಂಘಟನೆಯ ವತಿಯಿಂದ ಮಣಿಪುರದಲ್ಲಿ ನಡೆದ ಮಹಿಳೆಯ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚ್ಯಾರ ಖಂಡಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಎರಿ್ರಸ್ವಾಮಿ ಎಐಡಿವೈಓ ಉಪಾಧ್ಯಕ್ಷ ಮಾತನಾಡಿದರು.
‘ಜಾತಿ, ಬುಡಕಟ್ಟುಗಳ ನಡುವೆ ಬೆಳೆದಿರುವ ದ್ವೇಷಗಳನ್ನು ಜವಾಬ್ದಾರಿಯುತ ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದೆ ನಿಂತು ಬಗೆಹರಿಸುವ ಕೆಲಸ ಮಾಡಬೇಕಿತ್ತು. ಆದರೆ ದ್ವೇಷದ ಕಲಹಗಳಿಂದ ರಾಜಕೀಯ ಲಾಭದ ಲೆಕ್ಕಾಚಾರ ಮಾಡುವುದು ದೇಶದ ರಾಜಕೀಯ ಅಧೋಗತಿಗೆ ತಲುಪಿದೆ ಎನ್ನುವುದನ್ನು ಸೂಚಿಸುತ್ತಿದೆ. ಗಲಭೆಗಳ ಕುರಿತು ರಾಷ್ಟ್ರನಾಯಕರ ಮೌನವು ವಿವಿಧ ಬಗೆಯ ಆತಂಕ, ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಮೌಲ್ಯರಹಿತ ರಾಜಕೀಯ ಪ್ರಭಾವದಿಂದ ಸಮಾಜದಲ್ಲಿ ದಲಿತ, ಮಹಿಳೆ, ಅಲ್ಪಸಂಖ್ಯಾತರನ್ನು ನೋಡುವ ದೃಷ್ಠಿಕೋನ ವಿಕೃತಗೊಂಡು, ದೌರ್ಜನ್ಯಗಳ ಸಂಖ್ಯೆ ಏರುತ್ತಲೆ ಇದೆ. ಮಣಿಪುರ ರಾಜ್ಯದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಾಗರಿಕರ ಸಮಾಜ ತಲೆತಗ್ಗಿಸುವ ಸಂಗತಿ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಎಲ್ಲಾ ರೀತಿಯ ಗಲಭೆಗಳಲ್ಲಿ ಮೊದಲು ಬಲಿಯಾಗುವವರು ಮಹಿಳೆಯರು. ಇದನ್ನು ಮಾಡುವವರು ಗಂಡಸರಾಗಿದ್ದರೂ ಅವರು ಜಾತಿ, ಧರ್ಮ, ಜನಾಂಗದ ಅಮಲನ್ನು ಏರಿಸಿಕೊಂಡವರಾಗಿರುತ್ತಾರೆ. ಇವರನ್ನು ಮನುಷ್ಯರು ಎನ್ನಲಾಗದು, ಮನುಷ್ಯ ರೂಪದ ರಾಕ್ಷಸರು’ ಎಂದು ಪಂಪಾಪತಿ ಎಐಡಿವೈಓ ಕಾರ್ಯದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವ ಕಾರಣ ಜಾತಿ,ಧರ್ಮಗಳ ಹೆಸರಿನಲ್ಲಿ ದೃವೀಕರಣವಾಗುತ್ತಿದ್ದು, ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಮಹಿಳೆಯನ್ನು ನಾಗರಿಕ ಸಮಾಜದ ಅವಿಭಾಜ್ಯ ಅಂಗವೆಂದು ಗ್ರಹಿಸುವ ಶಕ್ತಿ ಕಡಿಮೆಯಾಗಿ ಆಕ್ರಮಣ, ದೌರ್ಜನ್ಯಗಳು ಹೆಚ್ಚಾಗುತ್ತಿವೆ’ ಎಂದು ಸಂದೀಪ್ ಡಿಡಿ ಸಂಶೋಧಕರು ಮಾತನಾಡಿದರು.
ಪ್ರತಿಭಟನೆಯ ಆರಂಭದಲ್ಲಿ ಪಾಲಾಕ್ಷ ಹಡಗಲಿ ಇವರು ಮಹಿಳೆ ಗೌರವ ಎತ್ತಿ ಹಿಡಿಯುವ ಹಾಡನ್ನು ಹಾಡಿದರು. ಪ್ರಕಾಶ್ ನಾಯಕ್ ನಿರೂಪಣೆ ಮಾಡಿದರು. ಪ್ರತಿಭಟನೆಯಲ್ಲಿ ಮಂಜುಳಾ ಡೊಳ್ಳಿ, ಯಾಸ್ಮೀನ್, ಗೋಪಾಲಕೃಷ್ಣ, ವಿನೋದ್, ನಾಗರಾಜ್ ಉಮೇಶ್ ನಾಯಕ್, ಪಂಪಣ್ಣ, ಶಿವಕುಮಾರ್ ಬಂಗಿ ಮುಂತಾದವರು ಭಾಗವಹಿಸಿದ್ದರು.