ಪಿಡಿಓ ತಳವಾರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ತಾಳಿಕೋಟಿ: ತಾಲೂಕಿನ ಬಾವೂರ ಪಂಚಾಯತನ ಅಭಿವೃದ್ಧಿ ಅಧಿಕಾರಿ ಎಸ್.ವಾಯ್. ತಳವಾರ ಅವರನ್ನು ವರ್ಗಾವಣೆ ಮಾಡಬಾರದೆಂದು ಆಗ್ರಹಿಸಿ ಬಾವೂರ ಗ್ರಾಮ ಪಂಚಾಯತ್ನ ಹಲವು ಸದಸ್ಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ ಗ್ರಾಪಂ ಸದಸ್ಯ ಬಾಬು ಭಜಂತ್ರಿ ಮಾತನಾಡಿ ಬಾವೂರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಂಕರ ತಳವಾರ ಅವರು ಪ್ರಭಾರಿಗಳಾಗಿದ್ದರೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಅಭಿವೃದ್ಧಿ ಹಾಗೂ ಅಲ್ಲಿಯ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಅವರ ವರ್ಗಾವಣೆಯಿಂದ ಸಾಕಷ್ಟು ಹಿನ್ನಡೆಯಾಗುತ್ತದೆ. ಯಾವ ಕಾರಣಕ್ಕೂ ಅವರನ್ನು ವರ್ಗಾಯಿಸಬಾರದು ಹೊಸ ಆದೇಶ ಹಿಂಪಡೆಯುವವರೆಗೆ ನಾವು ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.
ಗ್ರಾಮ ಪಂಚಾಯತ್ನ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆಯನ್ನು ಆರಂಭಿಸಲಾಯಿತು.
ಪ್ರತಿಭಟನೆಯಲ್ಲಿ ಬಾಬು ಭಜಂತ್ರಿ, ವಿಠ್ಠಲ ಛಲವಾದಿ, ಸೋಮು ಕಾಮರಡ್ಡಿ, ಸಿದ್ದನಗೌಡ ಪಾಟೀಲ ಹಾಗೂ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು