ವಿದ್ಯಾರ್ಥಿ ವೇತನ ನೀಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ
ಚಿಕ್ಕೋಡಿ 27: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿ ಚಿಕ್ಕೋಡಿಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೇಶದಲ್ಲಿಯೇ ಕರ್ನಾಟಕ ಉತ್ತಮವಾದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಸಾವಿರಾರು ಹೊರರಾಜ್ಯದ ವಿದ್ಯಾರ್ಥಿಗಳು ಕರ್ನಾಟಕವನ್ನು ಶಿಕ್ಷಣಕ್ಕಾಗಿ ಅರಸಿ ಬರುತ್ತಿರುವುದು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಆದರೆ ಉನ್ನತ ಶಿಕ್ಷಣದ ಆಸೆಯನು ಇಟ್ಟುಕೊಂಡು ರಾಜ್ಯದ ಅದೆಷೋ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರ ನಮ್ಮ ನೆರವಿಗೆ ಧಾವಿಸುತ್ತದೆ. ನಮಗೆ ಆರ್ಥಿಕ ಬೆಂಬಲವನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡುತ್ತದೆಂದು ಕಾಲೇಜುಗಳಿಗೆ ದಾಖಲಾಗುತ್ತಾರೆ. ಆದರೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ ನೀಡಬೇಕಾದ ಪ್ರಾಮುಖ್ಯತೆಯನ್ನು ನೀಡದೆ ಇರುವುದು, ವಿದ್ಯಾರ್ಥಿ ವೇತನದಲ್ಲೂ ಮುಂದುವರೆಸುತ್ತಿರುವುದು ಈ ರಾಜ್ಯದ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿಗೆ ಕಾರಣವಾಗಿದೆ.
ಎಸ್ ಎಸ್ಸಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಯುಷ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪದವಿ ಮತ್ತು ಸ್ನಾತಕ್ಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ ರಾಜ್ಯ ಸಕಾರ ಸರಿಯಾದ ಸಮಯದಲ್ಲಿ ವಿದ್ಯಾರ್ಥಿ ವೇತನವನ್ನು ನೀಡದೆ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣವನ್ನು ಅತಂತ್ರ ಸ್ಥಿತಿಗೆ ತರುವ ಕೆಲಸವನ್ನು ಮಾಡಿದೆ. ರಾಜ್ಯದ ರೈತರ ಮಕ್ಕಳ ಶಿಕ್ಷಣಕ್ಕಾಗಿ ಹಿಂದಿನ ಸರ್ಕಾರ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಪ್ರಾರಂಭಿಸಿತು. ಈಗೀನ ಸರ್ಕಾರ ತಡೆಹಿಡಿಯುವ ಮೂಲಕ ರೈತ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಎಬಿವ್ಹಿಪಿ ನಗರ ಕಾರ್ಯದರ್ಶಿ ಸೂರಜ ಕಿಲ್ಲಿಕೇತ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.