ಹಿಂದೂ ಕಾರ್ಯಕರ್ತನ ಕಗ್ಗೊಲೆ-ದೌರ್ಜನ್ಯ ಖಂಡಿಸಿ ಪ್ರತಿಭಟನೆ
ರಾಣೀಬೆನ್ನೂರ 08: ದೇಶದಲ್ಲಿರುವ ಭಯೋತ್ಪಾದನಾ ಸಂಘಟನೆಗಳಿಂದ ನಿತ್ಯ ನಿರಂತರ ಅನ್ಯಾಯ, ಅತ್ಯಾಚಾರ, ಹಿಂಸೆ, ಹಾಡು ಹಗಲೇ ಕೊಲೆಗಳು ನಡೆಯುತ್ತಿರುವುದರಿಂದ ನಾಗರೀಕರು ಭಯ-ಭೀತರಾಗುವ ವಾತಾವರಣ ನಿರ್ಮಾಣವಾಗುತ್ತಲಿದೆ. ಹಿಂದು ಪರ ಹೋರಾಟಗಾರರ ಕಗ್ಗೊಲೆಯಾಗುತ್ತಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಮಂಗಳವಾರ ನಗರದಲ್ಲಿ ಹಿಂದೂ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಮುಖಂಡರು ಸಾವಿರಾರು ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ಭಾರಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿ ಮುಂಜಾನೆಯಿಂದಲೇ ಜಮಾವಣೆಗೊಂಡ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಕಗ್ಗೊಲೆ ಹಾಗೂ ಕುಂದಗೋಳದಲ್ಲಿ ನಡೆದ ಕುರಿಗಾಯಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಕುಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ನೇಣಿಗೆ ಏರಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ 3000ಕ್ಕೂ ಹೆಚ್ಚು ಹಿಂದೂ ಯುವಕರ ಸಮೂಹದೊಂದಿಗೆ ಹೊರಟ ಮೆರವಣಿಗೆಯು ತಹಶೀಲ್ದಾರ ಕಚೇರಿ ಎದುರು ಬೃಹತ್ ಸಭೆ ನಡೆಸಿ ಒಕ್ಕೊರಲ ಆಗ್ರಹದೊಂದಿಗೆ ತಮ್ಮ ಮನವಿ ಸಲ್ಲಿಸಿ ಶೀಘ್ರಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪತಹಶೀಲ್ದಾರ ಎಂ.ಎನ್.ಹಾದೀಮನಿಯವರಿಗೆ ಮನವಿ ಸಲ್ಲಿಸಲಾಯಿತು.
ಹೋರಾಟದ ಮುಂಚೂಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಪ್ರಕಾಶ ಬುರಡಿಕಟ್ಟಿ, ನಾಗರಾಜಸಾ ಪವಾರ, ಅಜೇಯ ಮಠದ, ರೂಪಾ ಚಿನ್ನಿಕಟ್ಟಿ, ಗುರುರಾಜ ಕುಲಕರ್ಣಿ, ಪ್ರಭಾವತಿ ತಿಳವಳ್ಳಿ, ಶಂಕರ ಕಾಕಿ, ರಾಘವೇಂದ್ರ ಚಿನ್ನಿಕಟ್ಟಿ, ಬಿ.ಕೆ. ರಾಜನಹಳ್ಳಿ, ದೀಪಕ್ ಹರಪನಹಳ್ಳಿ, ಪ್ರಕಾಶ ಪೂಜಾರ, ಅನಿಲ್ ಸಿದ್ದಾಳಿ, ಪರಮೇಶಪ್ಪ ಗೂಳಣ್ಣನವರ, ಪರಮೇಶಪ್ಪ ಯಡಿಯಾಪೂರ, ನಿತ್ಯಾನಂದ ಕುಂದಾಪುರ, ಕೃಷ್ಣಪ್ಪ ಬ್ಯಾಡಗಿ, ದಲಬಂಜನ, ರಾಜು ವರ್ಣೇಕರ್, ದಯಾಲಾಲ್ ಸಂಘವಿ, ದೇವರಾಜ್, ಹನುಮಂತಪ್ಪ ಚಳಗೇರಿ, ಶ್ರೀನಿವಾಸ ಏಕಬೋಟೆ, ರಮೇಶ ಗುತ್ತಲ, ಶಿವಾಜಿ ಮಾಕನೂರ, ಮೈಲಪ್ಪ ಗೋಣಿಬಸಮ್ಮನವರ, ರಾಯಣ್ಣ ಮಾಕನೂರ ಸೇರಿದಂತೆ ಮತ್ತಿತರ ಮುಖಂಡರು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು ಮುಂಜಾಗೃತಾ ಕ್ರಮವಾಗಿ ನಗರದೆಲ್ಲೆಡೆ ಡಿವೈಎಸ್ಪಿ ಟಿ.ವಿ.ಸುರೇಶ ಅವರ ನೇತೃತ್ವದಲ್ಲಿ ಭಾರಿ ಪೋಲೀಸ್ ಬಂದೋಬಸ್ತ್ ಏರಿ್ಡಸಲಾಗಿತ್ತು.