ರಸ್ತೆಗಳನ್ನು ದುರಸ್ತಿಗೊಳಿಸದ ತಾಲೂಕಾಡಳಿತದ ವಿರುದ್ಧ ಹೋರಾಟ
ಬೈಲಹೊಂಗಲ ನವೆಂಬರ್ 04: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಳಗಾವಿ ರಸ್ತೆಯ ವೀರರಾಣಿ ಕಿತ್ತೂರು ಚನ್ನಮ್ಮ ಮೂರ್ತಿವರೆಗಿನ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ವಿಫಲವಾಗಿರುವ ತಾಲೂಕಾ ಆಡಳಿತದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಜಿಪಂ ಸದಸ್ಯ ಶಂಕರ ಮಾಡಲಗಿ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿ, ಪಟ್ಟಣದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ವಾಹನ ಸವಾರರಿಗೆ ಮಾರಕವಾಗಿವೆ. ಮಳೆಗಾಲದ ದಿನದಲ್ಲಿ ರಸ್ತೆ ತುಂಬೆಲ್ಲಾ ತೆಗ್ಗು, ದಿನ್ನೆಗಳು ಬಿದ್ದು ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗ ಮಳೆಗಾಲ ಕಡಿಮೆಯಾಗಿ ತೆಗ್ಗು, ದಿನ್ನೆಗಳಲ್ಲಿ ಮಣ್ಣು ಶೇಖರಣೆಯಾಗಿ ಧೂಳಿನಲ್ಲೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೂ ಸುಮಾರು 2 ಕಿ.ಮೀ ನμÀ್ಟು ಮುಖ್ಯ ರಸ್ತೆ ತೀರಾ ಹದಗೆಟ್ಟಿದ್ದು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ತಾಲೂಕಾ ಆಡಳಿತ ವರ್ತಿಸುತ್ತಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಬೇಕಾದರೆ ಧೂಳನ್ನು ಮೈಮೇಲೆ ತಗೊಳ್ಳುತ್ತಾ ಸಾಗಬೇಕು. ಅಲ್ಲದೆ ಎಪಿಎಂಸಿ ಬಳಿ ರೈತರು, ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡುತ್ತಿದ್ದು ಈ ಧೂಳು ತರಕಾರಿಯ ಮೇಲೆ ಕುಳಿತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ತಾಲೂಕಾ ಆಡಳಿತ ಇಂತಹ ಹದಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಎದರು ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.