ಶ್ರೀಮುರಳಿ ಅಭಿನಯದ ಮದಗಜ ಬಿಡುಗಡೆಗೆ ಮುನ್ನವೇ ಲಾಭದಲ್ಲಿ..
ಬೆಂಗಳೂರು: ಡಿ 2 : ಈ ವಾರ ಸಿನಿಮಾಸಕ್ತ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.. ಏಕೆಂದರೆ ಬಹು ನಿರೀಕ್ಷಿತ ಸ್ಟಾರ್ ಚಿತ್ರ 'ಮದಗಜ' ಬಿಡುಗಡೆ ಕಾಣುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರವು ವಿಶೇಷವಾಗಿ ಆಕ್ಷನ್ ಪ್ರಿಯರಿಗೆ ಹಬ್ಬದೂಟ ಬಡಿಸಲಿದೆ. ಬಿಡುಗಡೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಡಿ.ಉಮಾಪತಿ ನಿರ್ಮಾಣದ ಹಾಗೂ ಎಸ್.ಮಹೇಶ್ ಕುಮಾರ್ ನಿರ್ದೇಶನದ ಚಿತ್ರವು ಹಲವು ಕಾರಣಗಳಿಗಾಗಿ ಈಗಾಗಲೇ ಹೆಚ್ಚು ಶಬ್ಧ ಮಾಡುತ್ತಿದೆ. ಚಿತ್ರದ ನಿರ್ಮಾಪಕರು ಸೇಫ್ ಆಗಿರುವುದು ಅದರಲ್ಲಿ ಮುಖ್ಯ ಭಾಗ.
ಈ ಸಂಬಂಧ ಅತ್ಯಂತ ಕೂಲಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ ನೀಡಿದರು ನಿರ್ಮಾಪಕ ಉಮಾಪತಿ. ಒಂದೆಡೆ ಫೈರಸಿ ಕಾಟದ ಭಯವಿದ್ದರೂ ನಾವು ಸೇಫ್ ಆಗಿದ್ದೇವೆ ಎಂಬ ಧೈರ್ಯವಿದೆ. ಆದರೆ ಯಾವುದೇ ನಿರ್ಮಾಪಕನಿಗೆ ತನ್ನ ಚಿತ್ರ ಚಿತ್ರಮಂದಿರಗಳಲ್ಲಿ ಅಬ್ಬರಿಸಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಹಾಗಾಗಿ ನಾವು ಅದರ ನಿರೀಕ್ಷೆಯಲ್ಲಿ ಇದ್ದೇವೆ. ಚಿತ್ರದ ಡಬ್ಬಿಂಗ್ ಹಕ್ಕು, ಸ್ಯಾಟಲೈಟ್ ಹಕ್ಕು ಹೀಗೆ ಎಲ್ಲವೂ ಮಾರಾಟವಾಗಿರುವುದು ನಿಜ. ಅದೇ ರೀತಿ ಓಟಿಟಿಗೆ ಕೂಡ ಕೇಳಲಾಗುತ್ತಿದೆ. ಇದರಿಂದ ನಮ್ಮ ಹಣ ಬಂದಿದೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ನಿರ್ದೇಶಕ ಮಹೇಶ್ ಕುಮಾರ್ ಚಿತ್ರದ ಆಶಯಗಳನ್ನು ಬಿಚ್ಚಿಟ್ಟರು. ಹಾಡುಗಳು ಮತ್ತು ಎಲ್ಲಾ ವಿಷಯಗಳಲ್ಲಿಯೂ ವಿಶೇಷತೆ ಕಾಯ್ದುಕೊಳ್ಳಲಾಗಿದೆ ಎಂದರು.
ಶ್ರೀಮುರಳಿ ಕೂಡ ಅತ್ಯಂತ ಲವಲವಿಕೆಯಿಂದ ಮಾತನಾಡಿದರು. ನನ್ನ ಹಿಂದಿನ ಚಿತ್ರಗಳಿಗಿಂತಲೂ ದೃಶ್ಯ ಸಂಯೋಜನೆ, ಸಾಹಸ ಮುಂತಾದ ವಿಷಯಗಳಲ್ಲಿ ಹೊಸತು ಎದ್ದು ಕಾಣುತ್ತದೆ. ಅಭಿಮಾನಿ ದೇವರುಗಳು ನಮ್ಮ ಕೈ ಹಿಡಿಯುವುದರಲ್ಲಿ ಸಂಶಯವೇ ಇಲ್ಲ ಎಂದರು.
ಶ್ರೀಮುರಳಿ ಅವರ ಎದುರು ನಟಿಸಿರುವ ಆಶಿಕಾ ರಂಗನಾಥ್ ಅವರಿಗೆ ಪಾತ್ರ ಮಾಡುವಾಗ ಬೇಕಾದಷ್ಟು ಸವಾಲುಗಳು ಎದುರಾದವಂತೆ.. ಮುಖ್ಯವಾಗಿ ಸಿಗರೇಟ್ ಸೇದುವುದು; ಸೈಕಲ್ ಹೊಡೆಯುವುದು ಕಷ್ಟವಾಗಿತ್ತು ಎಂದರು.
ಕಿನ್ನಾಳ್ ರಾಜ್ ಗೀತ ರಚನೆಯಲ್ಲಿ
ತಾಯಿಹಾಡು ಹೃದಯ ಬೆಸೆಯುತ್ತದೆ. ರವಿ ಬಸ್ರೂರು ಸಂಗೀತ ಅತ್ಯುತ್ತಮ. ತಾಯಿ ಹಾಡು ಸೇರಿದಂತೆ ಮೂರು ಹಾಡುಗಳನ್ನು ಸಂತೋಷ ವೆಂಕಿ ಹಾಡಿರುವುದು ವಿಶೇಷ. ಚಂದ್ರಮೌಳಿ ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. ವಿಲನ್ ಪಾತ್ರಧಾರಿ ಗರುಡರಾಮ್ ಭಯಾನಕವಾಗಿ ಕಾಣುವುದು ಚಿತ್ರದ ಮುಖ್ಯಾಂಶಗಳಾಗಿವೆ ಎಂಬ ವಿವರಗಳು ಬಂದವು..