ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ : ಸೆ.17 ರಿಂದ ವಿವಿಧ ಸೇವಾ, ರಚನಾತ್ಮಕ ಕಾರ್ಯಕ್ರಮ: ಸಂಸದ ಜೊಲ್ಲೆ
ಲೋಕದರ್ಶನ ವರದಿ
ಅಥಣಿ 15: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಸೆ.17 ರಿಂದ ಅಕ್ಟೋಬರ 2 ರವರೆಗೆ ಚಿಕ್ಕೋಡಿ ಜಿಲ್ಲೆಯಲ್ಲಿ ವಿವಿಧ ಸೇವಾ ಹಾಗೂ ರಚನಾತ್ಮಕ ಕಾರ್ಯಕ್ರಮಗಳು “ಸೇವಾ ಪಾಕ್ಷಿಕ” ಅವಧಿಯಲ್ಲಿ ನಡೆಯಲಿವೆ ಎಂದು ಚಿಕ್ಕೋಡಿ ಸಂಸದ ಅಣ್ಣಸಾಹೇಬ ಜೊಲ್ಲೆ ತಿಳಿಸಿದರು. ಅವರು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ಅವಧಿಯಲ್ಲಿ ರಕ್ತದಾನ ಶಿಬಿರ, ಪ್ರಧಾನಿ ನರೇಂದ್ರ ಮೋದಿಯವರ ಜೀವನ ಕುರಿತು ಪ್ರದರ್ಶಿನಿ, ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗಿಗಳಿಗೆ ಕೃತಕ ಕಾಲು ಜೋಡಣೆ, ಮಂಡಲ ಹಾಗೂ ಬೂತ್ ಮಟ್ಟದಲ್ಲಿ ಕ್ಷಯ ರೋಗಿಗಳನ್ನು ಗುರಿತಿಸಿ ಒಂದು ವರ್ಷ ಅವಧಿಗೆ ದತ್ತು ಪಡೆಯುವ ಕಾರ್ಯ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ, ಕೆರೆಗಳನ್ನು ಸ್ವಚ್ಛಗೊಳಿಸುವ ಅಮೃತ ಸರೋವರ ಯೋಜನೆ, ಮಳೆ ನೀರಿನ ಸಂಗ್ರಹದ ಬಗೆಗೆ ಅರಿವು, ಆತ್ಮ ನಿರ್ಭರ ಭಾರತದ ಕಲ್ಪನೆಯನ್ನು ಜಿಲ್ಲೆಯಲ್ಲಿ ಜಾಗೃತಿಗೊಳಿಸುವದು, ಪ್ರತಿ ಮಂಡಲದ ಅಂಗನವಾಡಿ ದತ್ತು ಪಡೆದು ಅಭಿವೃದ್ಧಿ ಪಡೆಸುವ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಇದೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೀವನ, ದೂರದೃಷ್ಟಿ, ಯೋಜನೆ ಹಾಗೂ ಸಾಧನೆಗಳ ಕುರಿತಾಗಿ ಬೌದ್ಧಿಕ ಸಭೆಗಳನ್ನು ಪ್ರತಿ ಮಂಡಲದಲ್ಲಿ ನಡೆಸಲಾಗುವುದು, ವಿವಿಧ ಲೇಖಕರಿಂದ ಪ್ರಧಾನ ಮಂತ್ರಿಗಳ ಜೀವನ ಹಾಗೂ ಗುರಿಯ ಕುರಿತು ಲೇಖನಗಳನ್ನು ಸಿದ್ಧಪಡಿಸಲಾಗುವುದು ಎಂದ ಅವರು ಇದೇ ಸೆ. 25ರಂದು ಬಿಜೆಪಿ ಸಂಸ್ಥಾಪಕರಾದ ಪಂ.ದೀನದಯಾಳ ಉಪಾಧ್ಯಾಯರ ಜಯಂತಿ ಅಂಗವಾಗಿ ಪ್ರತಿಯೊಂದು ಬೂತ್ ನಲ್ಲಿ ಒಂದು ಗುಣಾತ್ಮಕ ಕಾರ್ಯಕ್ರಮ ಹಾಗೂ ದೀನದಯಾಳಜಿ ಕುರಿತು ಸಂವಾದ ಕಾರ್ಯಕ್ರಮ ನಡೆಸಲಿದ್ದೇವೆ ಹಾಗೂ ಸೆ.25 ಭಾನುವಾರದಂದು ಪ್ರಸಾರವಾಗಲಿರುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಬೂತ್ ನಲ್ಲಿ ಸಾಮೂಹಿಕವಾಗಿ ವೀಕ್ಷಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಚಿಕ್ಕೋಡಿ ಜಿಲ್ಲಾ ಮಾಧ್ಯಮ ಸಂಚಾಲಕಿ ಮೃಣಾಲಿನಿ ದೇಶಪಾಂಡೆ ಮಾತನಾಡಿ, ರಾಜಕೀಯ ಪಕ್ಷಗಳು ಕೇವಲ ಚುನಾವಣೆ ಅಥವಾ ಪ್ರಚಾರ ಕಾರ್ಯಕ್ಕೆ ಸೀಮಿತ ಅಲ್ಲ ಎಂದು ಬಿಜೆಪಿ ಮತ್ತೊಮ್ಮೆ ತನ್ನ ಸೇವಾ ಚಟುವಟಿಕೆಗಳ ಮೂಲಕ ತೋರಿಸಿಕೊಟ್ಟಿದ್ದು, ಸಮಾಜದ ಪ್ರತಿ ವರ್ಗದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಸೇವಾ ಚಟುವಟಿಕೆ ತಲುಪುವಂತೆ ಮಾಡುವುದೇ ಈ ಸೇವಾ ಪಾಕ್ಷಿಕದ ಉದ್ದೇಶವಾಗಿದೆ ಎಂದ ಅವರು ಅಕ್ಟೋಬರ 2 ರಂದು ಗಾಂಧಿ ಜಯಂತಿ ಅಂಗವಾಗಿ ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಯುವ ಧುರೀಣ ಚಿದಾನಂದ ಸವದಿ ಉಪಸ್ಥಿತರಿದ್ದರು.