ಹೊಸಪೇಟೆ

ಪ್ರತಿಷ್ಠಿತ ವಂದೇ ಭಾರತ್ ರೈಲು ಆರಂಭಕ್ಕೆ ಪರಿಶೀಲನೆ

ಪ್ರತಿಷ್ಠಿತ ವಂದೇ ಭಾರತ್ ರೈಲು ಆರಂಭಕ್ಕೆ ಪರಿಶೀಲನೆ

ಲೋಕದರ್ಶನ ವರದಿ

ಹೊಸಪೇಟೆ 08: ಬಳ್ಳಾರಿಗುಂತಕಲ್ ಮಾರ್ಗವಾಗಿ ಹೊಸಪೇಟೆ-ಬೆಂಗಳೂರು ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಆರಂಭಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೇ ವಲಯವು ಪರಿಶೀಲನೆ ನಡೆಸಿದ್ದು, ರೈಲು ಆರಂಭಕ್ಕೆ ಆಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಗಂಟೆಗೆ 100 ರಿಂದ 130 ಕಿ.ಮಿ. ವೇಗದಲ್ಲಿ ಸಂಚರಿಸುವ ರೈಲಿನ ವೇಗಕ್ಕೆ ತಕ್ಕಂತೆ ಒತ್ತಡ ತಡೆದು ಕೊಳ್ಳುವ ಹೆಚ್ಚು ಸಾಮಥ್ರ್ಯವಿರುವ ರೈಲ್ವೆ ಹಳಿ ಮಾರ್ಗ ನಿರ್ಮಿಸಲಾಗಿದ್ದು, ಹೊಸಪೇಟೆ-ಬೆಂಗಳೂರು ನಡುವೆ ಈ ಮಾರ್ಗ ಸಂಪೂರ್ಣವಾಗಿ ವಿದ್ಯುದೀಕರಣವಾಗಿದ್ದು, ಜೋಡಿ ರೈಲು ಮಾರ್ಗದ ಸಂಪರ್ಕವಿದೆ ಹಾಗೂ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಕೋಚ್ಗಳಿಗೆ ನೀರು ತುಂಬಿಸುವ ಸೌಲಭ್ಯವಿದೆ. ಅಲ್ಲದೇ ಹೊಸಪೇಟೆಯು ಪ್ರಮುಖ ಪ್ರವಾಸಿ ಹಾಗೂ ಕೈಗಾರಿಕೆಗಳ ತಾಣವಾಗಿರುವುದರಿಂದ ಎರಡು ನಗರಗಳ ನಡುವೆ ಪ್ರಯಾಣಿಕರ ದಟ್ಟಣೆ ಅಧಿಕವಾಗುತ್ತಾ ಸಾಗಿದೆ. 

ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೇಸ್ ರೈಲಿಗೆ ಫೆಬ್ರವರಿ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು, ಪ್ರಸ್ತುತ ನಮ್ಮ ರಾಜ್ಯದಲ್ಲಿ ಧಾರವಾಡ-ಬೆಂಗಳೂರು, ಮತ್ತು ಮೈಸೂರು-ಬೆಂಗಳೂರು-ಚನ್ನೈ ನಡುವೆ ರೈಲು ಸಂಚರಿಸುತ್ತದೆ. ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಪ್ರವಾಸಿ ತಾಣಗಳ ನಡುವೆ ರೈಲು ಆರಂಭಿಸಲು ರೈಲ್ವೆ ಸಚಿವಾಲಯ ಉತ್ಸುಕವಾಗಿದೆ. ಆದಷ್ಟು ಬೇಗನೆ ಹೊಸಪೇಟೆಯು ವಂದೇ ಭಾರತ್ ರೈಲು ಸಂಪರ್ಕದ ಕಕ್ಷೆಗೆ ಸೇರಲಿ ಹಾಗೂ ಉದ್ದೇಶಿತ ರೈಲು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸಿ ಬೆಂಗಳೂರು ತಲುಪಿ ಅಲ್ಲಿಂದ 3:00 ಗಂಟೆಗೆ ನಿರ್ಗಮಿಸಿ ಹೊಸಪೇಟೆಯನ್ನು ರಾತ್ರಿ 10 ಗಂಟೆಗೆ ತಲುಪುವಂತೆ ವೇಳಾಪಟ್ಟಿಯನ್ನು ತಯಾರಿಸಬೇಕೆಂದು ಈ ಭಾಗದ ಜನರ ಒತ್ತಾಸೆಯಾಗಿದೆ.

ಸುದ್ದಿ ಓದಿ