ಸೌಂದತ್ತಿ

ಮಂಡನೆ ಮಾಡುವಾಗ ಪೂರ್ವ ತಯಾರಿಯನ್ನು ಪರಿಪೂರ್ಣವಾಗಿ ಮಾಡಿಕೊಳ್ಳಿ : ಕಿರಿಯ ನ್ಯಾಯವಾದಿಗಳಿಗೆ ಹಿರಿಯ ದಿವಾಣಿ ನ್ಯಾಯಾಧೀಶ ಶಶಿಧರ ಗೌಡ ಸಲಹೆ

ಮಂಡನೆ ಮಾಡುವಾಗ ಪೂರ್ವ ತಯಾರಿಯನ್ನು ಪರಿಪೂರ್ಣವಾಗಿ ಮಾಡಿಕೊಳ್ಳಿ : ಕಿರಿಯ ನ್ಯಾಯವಾದಿಗಳಿಗೆ ಹಿರಿಯ ದಿವಾಣಿ ನ್ಯಾಯಾಧೀಶ ಶಶಿಧರ ಗೌಡ ಸಲಹೆ

ಲೋಕದರ್ಶನ ವರದಿ 

ಸವದತ್ತಿ 07: ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಲ್ಲಿ ಕಿರಿಯ ನ್ಯಾಯವಾದಿಗಳು ಮಂಡನೆ ಮಾಡುವಾಗ ಅವಶ್ಯಕವಾಗಿರುವಂತ ಪೂರ್ವ ತಯಾರಿಯನ್ನು ಪರಿಪೂರ್ಣವಾಗಿ ಮಾಡಿಕೊಳ್ಳಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಶಶಿಧರ ಗೌಡ ಸಲಹೆ ನೀಡಿದರು. 

ಸ್ಥಳೀಯ ನ್ಯಾಯಾಲಯದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸವದತ್ತಿ, ಜೈಂಟ್ಸ್‌ ಗ್ರೂಪ್ ಸವದತ್ತಿ, ರೇಣುಕಾ ಸಹೇಲಿ ಮತ್ತು ಪ್ರೇಮ ಬಿಂದು ರಕ್ತ ಬಂಡಾರ ನಿಧಿ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನ್ಯಾಯವಾದಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಯಾವ ಯಾವ ಪ್ರಕರಣದಲ್ಲಿ ಹೇಗೆ ಕ್ರಾಸ್ ಎಗ್ಜಾಮಿನೇಶನ ಮಾಡಬೇಕು ಎನ್ನುವದರ ಬಗ್ಗೆ ಯುವ ವಕೀಲರಿಗೆ ಮಾಹಿತಿ ನೀಡಿದರು. 

ಹುಬ್ಬಳ್ಳಿಯ ಪ್ರೇಮ ಬಿಂದು ರಕ್ತ ಬಂಡಾರ ನಿಧಿಯ ಮುಖ್ಯಸ್ಥ ವಿ.ಎಮ್‌. ಹಿರೇಮಠ ಮಾತನಾಡಿ, ರಕ್ತದಾನ ಮಾಡುವದರಿಂದ ಆಗುವ ಪ್ರಯೋಜನೆ ಮತ್ತು ಬೇರೊಬ್ಬರಿಗೆ ಆಗುವ ಸಹಾಯದ ಕುರಿತು ವಿವರಣೆ ನೀಡಿದರು.  

ಸನ್ಮಾನಿತರ ಪರ ಹಿರಿಯ ನ್ಯಾಯವಾದಿ ವಿ.ವಿ.ಹಿರೇಮಠ ಮಾತನಾಡಿ, ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡು ಯುವ ವಕೀಲರು ವೃತ್ತಿಯ ಗೌರವವನ್ನು ಹೇಗೆ ಎತ್ತಿಹಿಡಿಯಬೇಕು ಎನ್ನುವ ಬಗ್ಗೆ ಹೇಳಿದರು. 

ನ್ಯಾಯವಾದಿಗಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅನೇಕರು ರಕ್ತದಾನವನ್ನು ಮಾಡಿದರು. ಹಿರಿಯ ನ್ಯಾಯವಾದಿಗಳಾದ ಬಿ.ಎಚ್‌.ರಜಪೂತ, ವಿ.ವಿ.ಹಿರೇಮಠ, ಎ.ಎಸ್‌.ಲಚ್ಚಮನಾಯ್ಕರ, ಯು.ಆರ್‌.ತಿಗಡಿ, ಸಿ.ಜಿ.ತುರಮರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೂತನವಾಗಿ ವಕೀಲರ ಸಂಘಕ್ಕೆ ಸದಸ್ಯರಾಗಿ ಆಗಮಿಸಿದ ಸದಸ್ಯರನ್ನು ಸ್ವಾಗತಿಸಲಾಯಿತು. 

ನ್ಯಾಯವಾದಿ ಸಂಘದ ಅಧ್ಯಕ್ಷ ಸಿ.ವಿ.ಸಂಭಯ್ಯನಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ, ಸಹಾಯಕ ಸರಕಾರಿ ಅಭಿಯೋಜಕರಾದ ರಂಜಿತಕುಮಾರ ರಾಥೋಡ, ಮುತ್ತುರಾಜ ದೇವಲಾಪೂರ, ಜೈಂಟ್ಸ್‌ ಗ್ರೂಪ್ ಅಧ್ಯಕ್ಷ ಯಶವಂತ ಪಾಸ್ತೆ, ಸಹೇಲಿ ಸಂಘದ ಅಧ್ಯಕ್ಷೆ ಪಲ್ಲವಿ ಪದಕಿಪಾಟೀಲ, ಹಿರಿಯ ವಕೀಲರಾದ ಬಿ.ವಿ. ಮಲಗೌಡರ, ಬಿ.ಎಮ್‌. ಯಲಿಗಾರ, ಎಸ್‌.ಬಿ. ಹೂಲಿಕಟ್ಟಿ, ಎಮ್‌.ಎಮ್‌. ಯಲಿಗಾರ, ಎಮ್‌.ಬಿ. ದ್ಯಾಮನಗೌಡರ, ಪಿ.ಎನ್‌.ಡೊಳ್ಳಿನ, ವಿ.ಜಿ.ಪಾಟೀಲ ಉಪಸ್ಥಿತರಿದ್ದರು. 

ಎಮ್‌.ಎಮ್‌. ಮಡಿವಾಳರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಎಸ್‌.ಎಸ್‌.ಮಾನೆ ನಿರೂಪಿಸಿದರು. ಸಚಿನ ಗಿರಿಜನ್ನವರ ವಂದಿಸಿದರು. 


ಸುದ್ದಿ ಓದಿ