ಬಳ್ಳಾರಿ

ವಿವಿಧ ಜಯಂತಿಗಳ ಆಚರಣೆ ನಿಮಿತ್ತ ಪೂರ್ವಭಾವಿ ಸಿದ್ಧತಾ ಸಭೆ

ವಿವಿಧ ಜಯಂತಿಗಳ ಆಚರಣೆ ನಿಮಿತ್ತ ಪೂರ್ವಭಾವಿ ಸಿದ್ಧತಾ ಸಭೆ

ಜಿಲ್ಲಾಡಳಿತದಿಂದ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ: ಎಡಿಸಿ ಮೊಹಮ್ಮದ್ ಝುಬೇರಾ 

ಬಳ್ಳಾರಿ 21 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಹೇಳಿದರು. 

ವಿವಿಧ ಮಹನೀಯರ ಜಯಂತಿಗಳ ಆಚರಣೆ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜೂ.27 ರಂದು ಕೆಂಪೇಗೌಡ ಜಯಂತಿ, ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಜು.03 ರಂದು ಹಡಪದ ಹಪ್ಪಣ್ಣ ಜಯಂತಿಯನ್ನು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಬಾಬು ಹಾಗೂ ಎಲ್ಲಾ ಸಮುದಾಯದ ಮುಖಂಡರು ಇದ್ದರು. 

------- 

ರೇಡಿಯೋಪಾರ್ಕ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ 

ಬಳ್ಳಾರಿ 21 : ನಗರದ ರೇಡಿಯೋ ಪಾರ್ಕ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರದಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿನಿಯರಿಗೆ  ಯೋಗಾಭ್ಯಾಸ ಕೈಗೊಳ್ಳಲಾಯಿತು. 

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವೀರ ರಾಘವುಲು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗ ಎನ್ನುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಎಲ್ಲರೂ ಆರೋಗ್ಯವನ್ನು ಕಾಪಾಡಲು ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.  

ದೈಹಿಕ ನಿರ್ದೇಶಕರಾದ ಮಂಜಮ್ಮ ಅವರು ಯೋಗ ದಿನಾಚರಣೆಯ ಮಹತ್ವ ತಿಳಿಸಿದರು.  

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಪ್ರಜ್ಞಾ ಕೆ.ವಿ, ಹಿರಿಯ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ.ಕೆ, ಇಂದ್ರಿಪಿ ಮಲ್ಲಿಕಾರ್ಜುನ, ಮರಿಗಾದಿಲಿಂಗಪ್ಪ, ಡಾ.ಕೊಟ್ರ​‍್ಪ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. 

-------- 

ಆದರ್ಶ ವಿದ್ಯಾಲಯದಲ್ಲಿ 7,8,9 ನೇ ತರಗತಿ ಪ್ರವೇಶಕ್ಕೆ ಖಾಲಿ ಸೀಟುಗಳ ಭರ್ತಿ: ಅರ್ಜಿ ಆಹ್ವಾನ 

ಬಳ್ಳಾರಿ 21 : 2023-24ನೇ ಸಾಲಿಗೆ ಸರ್ಕಾರಿ ಆದರ್ಶ ವಿದ್ಯಾಲಯದ 7, 8 ಮತ್ತು 9 ನೇ ತರಗತಿ ಪ್ರವೇಶಕ್ಕೆ ಖಾಲಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯಗುರುಗಳಾದ ಎಂ.ಕುಮಾರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಖಾಲಿ ಸೀಟುಗಳ ದಾಖಲಾತಿಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 05 ಆಗಿರುತ್ತದೆ. 

ಹೆಚ್ಚಿನ ಮಾಹಿತಿಗಾಗಿ ನಗರದ ಈದ್ಗಾ ರಸ್ತೆಯ ಹೀರಾಳ್‌ಕುಡಂನ ಆದರ್ಶ ವಿದ್ಯಾಲಯ ಅಥವಾ ಮೊ.9449463870ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. 

--------- 

ಸರಕು ಸಾಗಾಣಿಕೆ ವಾಹನ ಖರೀದಿಸಲು ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ 

ಬಳ್ಳಾರಿ 21 : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2019-20 ನೇ ಸಾಲಿನಲ್ಲಿ ಬುಡಕಟ್ಟು ಉಪಯೋಜನೆಗೆ ವಿಶೇಷ ಕೇಂದ್ರ ನೆರವಿನಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮದಡಿ ಸರಕು ಸಾಗಾಣಿಕೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಸರಕು ಸಾಗಾಣಿಕೆ ವಾಹನ ಘಟಕಕ್ಕೆ 32 ಭೌತಿಕ ಗುರಿ ಹೊಂದಲಾಗಿದೆ. 

ಜಿಲ್ಲೆಯ ಪರಿಶಿಷ್ಟ ವರ್ಗದ ಜನರಿಗೆ ಸೌಲಭ್ಯವನ್ನು ಒದಗಿಸಲು ಅರ್ಜಿಗಳನ್ನು ಬಳ್ಳಾರಿ, ಸಂಡೂರು ಮತ್ತು ಸಿರುಗುಪ್ಪ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅಥವಾ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳಬಹುದು. ಅರ್ಜಿಗಳನ್ನು ಜೂ.25 ರೊಳಗಾಗಿ ಜಿಲ್ಲಾ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗಳಿಗೆ ಸಲ್ಲಿಸಬೇಕು. 

*ಷರತ್ತುಗಳು:* 

ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಬಳ್ಳಾರಿ ಜಿಲ್ಲೆಯವರಾಗಿರಬೇಕು. ವಯಸ್ಸು 18 ರಿಂದ 60 ವರ್ಷಗಳ ಒಳಗಿರಬೇಕು. ಫಲಾನುಭವಿಗಳ ವಾರ್ಷಿಕ ಆದಾಯ ರೂ.1.50 ಲಕ್ಷಗಳ ಒಳಗಡೆ ಇರಬೇಕು. ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಘಟಕ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ಅಥವಾ ಮುಚ್ಚಳಿಕೆ ಪತ್ರ ನೀಡಬೇಕು. ಅರ್ಜಿದಾರರು ಬಿಪಿಎಲ್ ಕಾರ್ಡ್‌ ಮತ್ತು ಆಧಾರ್‌ಕಾರ್ಡ್‌ ಹೊಂದಿರಬೇಕು. ಸರಕು ಸಾಗಾಣಿಕೆ ವಾಹನ ಘಟಕಕ್ಕೆ ಡ್ರೈವಿಂಗ್ ಲೈಸನ್ಸ್‌ ಪಡೆದಿರಬೇಕು. 

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಅಥವಾ ಮೊ.9740578247 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಕೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

----- 

ವ್ಯಕ್ತಿ ಕಾಣೆ 

ಬಳ್ಳಾರಿ 21 : ನಗರದ ಎಪಿಎಂಸಿಯ ಟಿ.ಜಿ. ಆಯಿಲ್ ಮಿಲ್ ಮಾರೆಮ್ಮ ಗುಡಿ ಹತ್ತಿರದ ಚೆಲುವಾದಿ ಕೇರಿಯ  ನಿವಾಸಿಯಾದ ಬಿ.ಸುರೇಶಬಾಬು ಎನ್ನುವ 32  ವರ್ಷದ ವ್ಯಕ್ತಿ ಕಾಣೆಯಾಗಿರುವ ಕುರಿತು ಎಪಿಎಂಸಿ ಯಾರ್ಡ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ರಂಗನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಎತ್ತರ 5.1 ಅಡಿ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ತೆಳ್ಳನೆ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಕೂದಲು ಇರುತ್ತವೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಗೆರೆಗಳಿರುವ ತುಂಬು ತೋಳಿನ ಚೆಕ್‌ಶರ್ಟ್‌, ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್ ಧರಿಸಿರುತ್ತಾನೆ. 

    ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ದೂ.08392-250033, ಮೊ.948080396 ಹಾಗೂ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಬಹುದು ಎಂದು ಅವರು ತಿಳಿಸಿದ್ದಾರೆ. 

------- 


ಸುದ್ದಿ ಓದಿ