ನಿಧಿ ಸಮರ್ಪಣೆ ಅಭಿಯಾನದ ಪೂರ್ವಭಾವಿ ಸಭೆ
ಬೈಲಹೊಂಗಲ 13: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ಫೆ 5ರವರೆಗೆ ನಡೆಯಲಿರುವ ಮನೆ ಮನೆ ಸಂಪರ್ಕಿಸಿ ನಿಧಿ ಸಮರ್ಪಿಸುವ ಅಭಿಯಾನದ ಹೋಬಳಿ ಪೂರ್ವಭಾವಿ ಸಭೆಯನ್ನು ತಾಲೂಕಿನ ದೊಡವಾಡ ಗ್ರಾಮದೇವಿ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.
ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ಪ್ರಮೋದ ಕುಲಕರ್ಣಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ರಾಷ್ಟ್ರ ಮಂದಿರವಾಗಿದೆ ಅದು ಪ್ರತಿಯೊಬ್ಬ ಭಾರತೀಯನ ಮನದ ಮಂದಿರವಾಗಲಿದೆ. ಹೀಗಾಗಿ ಈ ಸತ್ಕಾರ್ಯದಲ್ಲಿ ಜಾತಿ ಪಂಥ ಮೀರಿ ಪ್ರತಿಯೊಬ್ಬ ಭಾರತೀಯನು ತನು ಮನ ಧನದ ಮೂಲಕ ಸಮರ್ಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ನಿಧಿ ಸಮರ್ಪಣಾ ಅಭಿಯಾನವನ್ನು ಜ.15 ರಿಂದ ಫೆ. 5 ರವೆರೆಗೆ ನಡೆಸಲಾಗುತ್ತಿದೆ ಎಂದರು.
ಆರ್ಎಸ್ಎಸ್ ಘಟಕದ ಯಲ್ಲಪ್ಪ ಮಡಿವಾಳರ, ಪ್ರಮೋದಸ್ವಾಮಿ ವಕ್ಕುಂದಮಠ, ಅಶೋಕ ಸವದತ್ತಿ, ದಯಾನಂದ ಗೆಜ್ಜಿ, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ರಾಚಯ್ಯ ಹಿರೇಮಠ ಸೇರಿದಂತೆ ಗ್ರಾಮದ ನೂರಾರು ಯುವಕರು, ಹಿರಿಯರು ಇದ್ದರು.