ಮುಂದಗೋಡ

ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವಿಸಬೇಕು:ರೂಪಾ

ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವಿಸಬೇಕು:ರೂಪಾ

ಮುಂಡಗೋಡ:ಗರ್ಭಿಣಿಯರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದರ ಜೊತೆಗೆ ಕಾಳು, ತರಕಾರಿ, ಸೊಪ್ಪು ಮತ್ತು ಪೌಷ್ಟಿಕಾಂಶ ಆಹಾರಗಳನ್ನು ಸೇವಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ರೂಪಾ ಅಂಗಡಿ ಹೇಳಿದರು.    

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಮಂಗಳವಾರ ಜರುಗಿದ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಳಿಯಾಳ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಅತಿ ಹೆಚ್ಚು ಪೋಕ್ಸೋ ಪ್ರಕರಣಗಳು ವರದಿಯಾಗುತ್ತಿವೆ. ಯುವತಿಯರು ಮತ್ತು ಯುವಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು. ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎನ್‌.ಎಚ್‌.ಹಿರೇಮಠ ಮಾತನಾಡಿ ಗರ್ಭಿಣಿ ಹೆಂಗಸರು ಅಂಗನವಾಡಿ ಕೇಂದ್ರಗಳಲ್ಲಿ ಸಿಗುವ ಸವಲತ್ತುಗಳ ಸದುಪಯೋಗ ಪಡೆಯಬೇಕು ಎಂದರು.   

ಇದೇ ಸಂದರ್ಭದಲ್ಲಿ ಗ್ರಾಮದ ಗರ್ಭಿಣಿ ಹೆಣ್ಣುಮಕ್ಕಳಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು. ವೇದಿಕೆ ಮೇಲೆ ವಿವಿಧ ಬಗೆಯ ಆಹಾರ ಪದಾರ್ಥಗಳು, ಹಣ್ಣು-ಹಂಪಲ, ತರಕಾರಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಮಾರಕ್ಕ ದುರಮುರಗಿ, ಸದಸ್ಯರಾದ ಸಂತೋಷ ಭೋಸಲೆ, ರಮೇಶ ನೇಮಣ್ಣವರ, ಮಹಮ್ಮದ್ ಶಾ, ಪರಶುರಾಮ ಕಬ್ಬೇರ, ರೇಷ್ಮಾ ಕಲಘಟಗಿ, ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಉಮಾ ಸ್ವಾಗತಿಸಿದರು. ಬರಮಣ್ಣ ಆಲೂರ ವಂದಿಸಿದರು. 


ಸುದ್ದಿ ಓದಿ