ರಾಣೆಬೆನ್ನೂರ

ಅಧಿಕಾರ ಶಾಶ್ವತವಲ್ಲ ಮಾಡಿದ ಕೆಲಸ ಶಾಶ್ವತ: ಅರುಣಕುಮಾರ ಪೂಜಾರ

ಅಧಿಕಾರ ಶಾಶ್ವತವಲ್ಲ ಮಾಡಿದ ಕೆಲಸ ಶಾಶ್ವತ: ಅರುಣಕುಮಾರ ಪೂಜಾರ

ರಾಣೇಬೆನ್ನೂರ 13: ಸಮುದಾಯದಲ್ಲಿ ಸೇವೆ ಸಲ್ಲಿಸುವ ಯಾವುದೇ ಕ್ಷೇತ್ರವಿರಲಿ ಆ ಕ್ಷೇತ್ರದಲ್ಲಿ ಕಾಯಾ ವಾಚಾ ಮನಸಾ ಸೇವೆ ಸಲ್ಲಿಸಿದರೆ ಸಮಾಜ ನಮ್ಮನ್ನು ಸದಾಕಾಲ ಗೌರವಿಸುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಈ ನಾಡಿನ ಶಿಕ್ಷಕರ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಸಂಘಟನೆಗಳು, ರಾಜಕೀಯ ವ್ಯಕ್ತಿಗಳು ಶ್ರಮಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರವೂ ಸಹ ಸಾಕಷ್ಟು ಪ್ರಯತ್ನಿಸುತ್ತಿದೆ. ಅದಕ್ಕೆ ಶಿಕ್ಷಕರ ಸಹಕಾರ ಮತ್ತು ತಾಳ್ಮೆ ಅಗತ್ಯವಾಗಿ ಬೇಕಾಗುತ್ತದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಅವರು ಗುರುವಾರ ನಗರದ ಹೊರ ವಲಯ ಶಕ್ತಿಧಾಮ ಟೌನ್‌ಶಿಪ್ ಶಿಕ್ಷಕರ ಬಡಾವಣೆ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಶಿಕ್ಷಣ ಸಾಧಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ, ಸರ್ವ ಸಾಮಾನ್ಯ ಸಭೆ ಮತ್ತು 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜಕಾರಣಿಗಳಿಗೆ ಅಧಿಕಾರ ಎಂದಿಗೂ ಶಾಸ್ವತವಲ್ಲ. ಆದರೆ, ಅಧಿಕಾರ ಇದ್ದಾಗ ಮಾಡುವ ಯಾವುದೇ ಕೆಲಸ ಎಂದೆಂದಿಗೂ ಶಾಸ್ವತವಾಗಿರುತ್ತದೆ. ಯಾವುದೇ ಸಮಸ್ಯೆ ಪರಿಹಾರಕ್ಕೆ ಇಲಾಖೆಯ ಅಧಿಕಾರಿಗಳು ರಾಜಕಾರಣಿಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಇದರಿಂದ ಸಮಸ್ಯೆಗಳು ಪರಿಹಾರ ಕಾಣದೆ ಮತ್ತಷ್ಟು ಜಠಿಲಗೊಳ್ಳುತ್ತದೆ. ಸಂಘಟನೆಗಳು ಇಂದು ಬಲಿಷ್ಠವಾಗಿ ಗಟ್ಟಿಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು. 

ಯಾವುದೇ ವಿಚಾರದಲ್ಲಿ ಪರಿಹಾರಕ್ಕೆ ಎಲ್ಲವೂ ಕಾನೂನಿನಿಂದಲೇ ಸಾಧ್ಯವಾಗುವುದಿಲ್ಲ. ಕೆಲವು ಬಾರಿ ಸ್ವಲ್ಪ ಭಾಗ ಕಾನೂನು ನಿಯಮ ಬಾಹೀರವಾಗಿ ಮುಂದುವರೆಯಬೇಕಾಗುತ್ತದೆ. ಶಿಕ್ಷಕರ ಸಮಸ್ಯೆ ಹೇಳತೀರದಾಗಿದೆ. ಸ್ಥಳೀಯ ಕೆಲವು ಸಿಆರ್‌ಪಿಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ರಾಜ್ಯ ಸಂಘಟನೆಯ ಮುಖಂಡರು ತಾವೇ ನೇರವಾಗಿ ಪ್ರಯತ್ನಿಸಬೇಕು ಎಂದ ಪೂಜಾರ, ಭವಿಷ್ಯದ ದಿನಗಳಲ್ಲಿ ತಾವೇನಾದರೂ ಈ ಕ್ಷೇತ್ರದ ಮತದಾರರ ಬಹು ನೀರೀಕ್ಷೆಯಂತೆ ಸಚಿವನಾದರೆ ಬೇಡುವುದೊಂದೇ. ಅದು ಶಿಕ್ಷಣ ಖಾತೆಯಾಗಿರಬೇಕೆಂದು. ಇದರಲ್ಲಿ ಪರಿಹಾರಕ್ಕೆ ಪ್ರಯತ್ನಿಸುವ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಗುರಿ ಹೊಂದಿರಬೇಕು. ಅಂತವರಿಂದ ಮಾತ್ರ ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. 

ಜಿಲ್ಲಾ ಉಪ ನಿರ್ದೇಶಕ ಬಿ.ಎಸ್‌.ಜಗದೀಶ್ವರ್ ಅವರು ಮಾತನಾಡಿ, ಯಾವುದೇ ಸಂಘಟನೆಗಳು ತಮ್ಮ ಕ್ರಿಯಾಶೀಲತೆ ತೋರಿಸಬೇಕಾದರೆ, ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಂಘದ ಅಭಿವೃದ್ಧಿಯಾದರೆ ಶಿಕ್ಷಕರ ಸಮಸ್ಯೆಗಳು ಪರಿಹರಿಸಿಕೊಳ್ಳಲು ಸಾಧ್ಯವಾಗುವುದು ಎಂದರು. 

ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕ.ರಾ.ಪ್ರಾ.ಶಿ. ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅವರು, ರಾಜ್ಯದ ಶಿಕ್ಷಕರ ಹಿತ ಕಾಯುವುದೇ ಸಂಘಟನೆಯ ಮುಖ್ಯ ಗುರಿಯಾಗಿದೆ. ಸರ್ಕಾರ ರೂಪಿಸುವ ಅವೈಜ್ಞಾನಿಕ ನೀತಿಗಳನ್ನು ಸಂಘ ವಿರೋಧಿಸುತ್ತದೆ. ಸರ್ಕಾರದೊಂದಿಗೆ ಸಮಾಲೋಚಿಸುವುದು ಸಂಘದ ಗುರಿ. ಯಾವುದೇ ಯೋಜನೆಗಳು ಹೊಸದಾಗಿ ಜಾರಿಗೆ ತರಬೇಕಾದರೆ ಪರಸ್ಪರ ಚರ್ಚೆ ಅಗತ್ಯವಾಗಿ ಬೇಕು. ಶಿಕ್ಷಕರ ವಿರೋಧ ಎದುರಿಸಿ ಯಾವುದೇ ಸರ್ಕಾರಗಳು ಜಾರಿಗೆ ತರುವ ಯೋಜನೆಗಳು ಪರಿಪೂರ್ಣವಾಗಿ ಜಾರಿಗೊಳ್ಳುವುದಿಲ್ಲ. ಸರ್ಕಾರ ಮತ್ತು ಶಿಕ್ಷಕರ ಮಧ್ಯೆ ನಿರಂತರ ಸಂಪರ್ಕ ಹೊಂದಿ ಕೆಲಸ ಮಾಡುವ ಮತ್ತು ಶಿಕ್ಷಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಸಂಘಟನೆ ಹೊಂದಿದ್ದು, ತನ್ನ ಪ್ರಮಾಣಿಕ ಕರ್ತವ್ಯ ಮಾಡುತ್ತಲಿದೆ ಎಂದರು. 

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಸಂಘಟನೆ, ಸರ್ಕಾರ ಶಿಕ್ಷಕರು ಸಾದಕ ಬಾದಕ ಮತ್ತು ಪರಿಹಾರಗಳು ಕುರಿತು ಸಾಧ್ಯಾಂತವಾಗಿ ಮಾತನಾಡಿ, ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ವಿಜಯೇಂದ್ರ ಯತ್ನಳ್ಳಿ ಅವರು, ಜಿಲ್ಲೆಯ ಕೆಲವೇ ತಾಲೂಕುಗಳಲ್ಲಿ ಗುರು ಭವನಗಳಿಗೆ ಇನ್ನಿತರೆ ತಾಲೂಕು ಕೇಂದ್ರಗಳಲ್ಲಿ ಗುರು ಭವನಗಳ ನಿರ್ಮಾಣ ಅಗತ್ಯವಾಗಿದ್ದು, ಮುಖ್ಯಮಂತ್ರಿಗಳು ಈ ಜಿಲ್ಲೆಯವರೇಯಾಗಿದ್ದಾರೆ. ಅರುಣಕುಮಾರ ಪೂಜಾರ ಅವರು ನಿಕಟವರ್ತಿಗಳಾಗಿದ್ದು ಅವರೊಂದಿಗೆ ಸಂಪರ್ಕಿಸಿ ಭವನಗಳ ನಿರ್ಮಾಣಕ್ಕಾಗಿ ಪ್ರಯತ್ನಿಸಬೇಕು. ರಾಜ್ಯದ ಯಾವುದೇ ಇಲಾಖೆಗಳಲ್ಲಿ ನೌಕರರಿಗೆ ಪರೀಕ್ಷೆ ಇಲ್ಲ. ಆದರೆ ಶಿಕ್ಷಣ ಇಲಾಖೆಯಲ್ಲಿ ಬಡ್ತಿಗಾಗಿ ಶಿಕ್ಷಕರಿಗೆ ಮಾತ್ರ ಪರೀಕ್ಷೆ ತಂದಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ರದ್ದುಪಡಿಸಬೇಕು ಎಂದು ಸರ್ಕಾರಕ್ಕೆ ಅವರು ಮನವಿ ಮಾಡಿದರು. 

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎನ್‌.ಗುರುಪ್ರಸಾದ್, ಉಪ ನಿರ್ದೇಶಕ ಬಿ.ಎಸ್‌.ಜಗದೀಶ್ವರ, ಶಾಸಕ ಅರುಣಕುಮಾರ ಪೂಜಾರ ಮತ್ತಿತರ ಗಣ್ಯರನ್ನು ಸಂಘಟನೆ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಶಕ್ತಿಧಾಮ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಮೆಹರವಾಡೆ, ಸಂಘಟನೆಗಳ ಮುಖಂಡರಾದ ಪಿ.ಟಿ.ಕಾಮನಹಳ್ಳಿ, ಎಂ.ಬಿ.ಬೈರಮ್ಮನವರ, ಜಿ.ಬಿ.ಬೂದಿಹಾಳ, ಬಿ.ಅನುರಾಧ, ಸಿ.ಎನ್‌.ಕಲಕೋಟಿ. ಇ.ಸಿ.ಅಗಸಿಬಾಗಿಲು, ಅಶೋಕ ಹಾಡೂರ, ಅನ್ನಪೂರ್ಣ ಕಟಗಿ, ಎಸ್‌.ಆರ್‌.ಅಯ್ಯಣ್ಣನವರ, ಕೊಪ್ಪಳದ ಶರಣಬಸನಗೌಡ ಪಾಟೀಲ, ಭಾರತ್ ಸೇವಾ ದಳದ ಎಂ.ಎಂ.ಇಟಗೇರ ಸೇರಿದಂತೆ ಜಿಲ್ಲೆಯ 8 ತಾಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಶಿಕ್ಷಣದ ಮುಖಂಡರು ಉಪಸ್ಥಿತರಿದ್ದರು.  

ಶಿಕ್ಷಕಿ ಕವಿತಾ ಎಲ್‌.ಹೆಚ್‌., ಪ್ರಾರ್ಥಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ವಾಯ. ಗೋಣೆಪ್ಪನವರ ಸ್ವಾಗತಿಸಿದರು. ಎನ್‌.ಕೆ.ಹೇಮಂತ ನಿರೂಪಿಸಿ ಜಿ.ಬಿ.ಬೂದಿಹಾಳ ವಂದಿಸಿದರು. ನಂತರ ನಡೆದ ಸರ್ವ ಸಾಮಾನ್ಯ ಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚೆಯಾಗಿ ಅದರ ಪರಿಹಾರಕ್ಕೆ ಮುಂದಾಗುವುದಾಗಿ ರಾಜ್ಯಾಧ್ಯಕ್ಷರು ಜಿಲ್ಲೆಯ ಶಿಕ್ಷಕರಿಗೆ ಭರವಸೆ ನೀಡಿದರು. 


ಸುದ್ದಿ ಓದಿ