ಕಿತ್ತೂರು ಉತ್ಸವ ವೀರ ಜ್ಯೋತಿ ಯಾತ್ರೆಗೆ ಪೂಜೆ
ಬೈಲಹೊಂಗಲ 23- ವೀರ ಮಾತೆ ಕಿತ್ತೂರ ಚನ್ನಮ್ಮನ ಶೌರ್ಯ, ಸಾಹಸವನ್ನು ರಾಷ್ಟ್ರಾದ್ಯಂತ ಪಸರಿಸುವ ಕಾರ್ಯವಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಶನಿವಾರ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2022 ರ ವೀರ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಕಿತ್ತೂರು ಸಂಸ್ಥಾನದ ಹಿರಿಮೆ, ಗರಿಮೆ ಪ್ರತಿಯೊಬ್ಬರ ಮನೆ, ಮನಗಳಲ್ಲಿ ಪ್ರಜ್ವಲಿಸುವಂತೆ ಮಾಡಬೇಕು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಾ ಉತ್ಸವವನ್ನು ಅ.23,24,25 ರಂದು ಸರಕಾರ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು ಸಾರ್ವಜನಿಕರು ಸಾಗರೋಪಾದಿಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿ ರಾಷ್ಟ್ರಪ್ರೇಮ ಮೆರೆಯಬೇಕು ಎಂದರು.
ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ರಾಜ್ಯ ಸರಕಾರ ಉತ್ಸವಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದು, ಮೂರು ದಿನಗಳ ಉತ್ಸವ ಅದ್ದೂರಿಯಾಗಿ ಜರುಗಲು ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಸೀಲ್ದಾರ ಬಸವರಾಜ ನಾಗರಾಳ, ತಾಪಂ.ಇಓ ಸುಭಾಸ ಸಂಪಗಾಂವಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಅಮಿತ ವಿಶ್ವನಾಥ ಪಾಟೀಲ, ಪುರಸಭೆ ಸದಸ್ಯರು, ಕಂದಾಯ ಇಲಾಖೆ, ಪುರಸಭೆ ಸಿಬ್ಬಂದಿ ವರ್ಗ ಚೆನ್ನಮ್ಮನ ಅಭಿಮಾನಿಗಳು ಇದ್ದರು.
ವೀರಜ್ಯೋತಿ ಯಾತ್ರೆಯ ಮೆರವಣಿಗೆಯಲಿ ಸುಮಂಗಲೆಯರ ಕುಂಭಮೇಳ, ಸ್ಕೌಟ್ಸ್ ಮತ್ತು ಗೈಡ್ಸ್ ಶಾಲಾ ವಿದ್ಯಾಥರ್ಿಗಳಿಂದ ಝಾಂಝ ಪದಕ, ಲೆಜಿಮ ಮೇಳ, ಕೋಲಾಟಗಳು ಕಳೆ ತಂದವು.