ಪೂಜೆ ಪುನಸ್ಕಾರದಂತ ಕಾರ್ಯಗಳು ಶಾಂತಿಗೆ ಮುನ್ನುಡಿ: ಅಜ್ಜಯ್ಯ ಸ್ವಾಮೀಜಿ

ಸವದತ್ತಿ 17: ದೇವಸ್ಥಾನ ಹಾಗೂ ಮಠ ಮಾನ್ಯಗಳಲ್ಲಿ ಇಂದು ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪೂಜೆ ಪುನಸ್ಕಾರದಂತ ಕಾರ್ಯಗಳು ಮಾನವನ ಶಾಂತಿಗೆ ಮುನ್ನುಡಿಯಾಗಿದ್ದು, ಶ್ರಾವಣ ಮಾಸದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಂತಹ ಕಾರ್ಯಕ್ರಮಗಳು ಮಾನವನಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತ್ತಿವೆ ಎಂದು ಬೆಟಸೂರಮಠದ ಅಜ್ಜಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಿರಿಜನ್ನವರ ಓಣಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ 25ನೇ ವರ್ಷದ ರುದ್ರಾಭಿಷೇಕದ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಪ್ರಸಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿನ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅನ್ನದಾಸೋಹಗಳು ಶ್ರೇಷ್ಠತೆಗೆ ಸಾಕ್ಷಿಯಾಗಿದ್ದು, ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿನ 25 ವರ್ಷಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಎಲ್ಲ ಸಮಾಜದ ಜನರಿಗೆ ಮಾದರಿಯಾಗಿ ಪರಿಣಮಿಸುತ್ತಿವೆ ಎಂದರು.
ರಾಮಲಿಂಗೇಶ್ವರ ಅರ್ಬನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪುಂಡಲೀಕ ಭೀ. ಬಾಳೋಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರತಿಯೊಂದು ದೇವಸ್ಥಾನಗಳಲ್ಲಿ ನಡೆಯುವ ಪೂಜೆಗಳು ಸಮಾಜದ ಜನರಲ್ಲಿ ಶಾಂತಿಯನ್ನು ನೆಲೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಧಾರ್ಮಿಕ ಮನೋಭಾವನೆಯತ್ತ ನಾವು ಸಾಗಬೇಕಿದೆ ಎಂದರು.
ದೇವಸ್ಥಾನದಲ್ಲಿ ಶ್ರಾವಣ ಮಾಸ ಪೂರ್ತಿ ಹಮ್ಮಿಕೊಂಡ ರುದ್ರಾಭಿಷೇಕದ ಕೊನೆಯ ದಿನ ಶ್ರೀ ದೇವರಿಗೆ ರುದ್ರಾಭಿಷೇಕ, ಪುಷ್ಪಾಲಂಕಾರದೊಂದಿಗೆ, ಬುತ್ತಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದದೊಂದಿಗೆ ಮಂಗಲಗೊಳಿಸಲಾಯಿತು.
ಗದಗಯ್ಯ ಚಿಕ್ಕಮಠ ಇವರ ವೈದಿಕತ್ವದಲ್ಲಿ ತಿಂಗಳಾದ್ಯಂತ ರುದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ವೇದಮೂರ್ತಿ ಶ್ರೀನಿವಾಸ ಗದಗ ಶ್ರೀ ಸತ್ಯನಾರಾಯಣ ಪೂಜೆ ನಡೆಸಿಕೊಟ್ಟರು. ಸುನೀಲ ಹಾಳಕೇರಿ ಮತ್ತು ಮಹೇಶ ಜಾಮದಾರ ಇತರರು ಬುತ್ತಿಪೂಜೆ ನೆರವೇರಿಸಿಕೊಟ್ಟರು.
ತಾನಾಜಿ ಶಿಂಧೆ, ರಾವ್ಸಾಹೇಬ ಜಾಮದಾರ, ಚಂದ್ರಣ್ಣ ಶಾಮರಾಯನವರ, ಅಶ್ವತ ವೈದ್ಯ, ಸುಭಾಸ ಪವಾರ, ಕೇದಾರ ಮೊಖಾಶಿ, ರವಿ ಗಿರಿಜನ್ನವರ, ಸಿದ್ದಪ್ಪ ರಾಹುತ, ಅಣ್ಣಪ್ಪ ಪವಾರ, ವಿ.ಜೆ.ಪವಾರ, ಮಲ್ಲೇಶ ರಾಜನಾಳ, ಅಂದುಸಿಂಗ್ ರಜಪುತ, ಅಶೋಕ ಶಿಂಧೆ, ಸುರೇಶ ಪಂತರ, ಲಕ್ಷ್ಮಣ ಕಿಟದಾಳ, ವಿಠ್ಠಲ ಜಾಮದಾರ, ಶಿವಾನಂದ ತಾರೀಹಾಳ, ಭೀಮಶಿ ನಲವಡೆ, ಗೀರೀಶ ಶಿಂಧೆ, ಆನಂದ ಶಿಂಧೆ, ಪ್ರಶಾಂತ ಪವಾರ, ಸೋಮನಿಂಗ ಶಿಂಧೆ, ಗೋಪಾಲ ಪಾಸಲಕರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.