ಚಿಕ್ಕೋಡಿ

ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸುವಂತೆ ಒತ್ತಾಯಿಸಿ ಮನವಿ

ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸುವಂತೆ ಒತ್ತಾಯಿಸಿ ಮನವಿ

ಚಿಕ್ಕೋಡಿ 12: ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸುವಂತೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರಿಗೆ  ಯಕ್ಸಂಬಾ ಪಟ್ಟಣಕ್ಕೆ ತೆರಳಿ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು.  

ತಮ್ಮ ಅಧಿಕಾರವಧಿಯಲ್ಲಿ ತಾವುಗಳು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದೀರಿ ನಾವು ತಮಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಚಿಕ್ಕೋಡಿ. ವಿಭಾಗವು ಈಗ ಸರ್ವತೋಮುಖ ಅಭಿವೃದ್ಧಿಯಾಗಿದೆ. ಇಲ್ಲಿ ಎಲ್ಲ ತರದ ಮೂಲಭೂತ ಸೌಕರ್ಯಗಳೂ ಸಹ ಇವೆ, ಇದಲ್ಲದೆ ಜಿಲ್ಲಾ ಮಟ್ಟಕ್ಕೆ ಬೇಕಾಗುವ ಎಲ್ಲ ಕಚೇರಿಗಳೂ ಸಹ ಕಾರ್ಯ ನಿರ್ವಹಿಸುತ್ತಿವೆ. ಚಿಕ್ಕೋಡಿ ಜಿಲ್ಲೆಯಾಗಬೇಕೆಂದು 2 ದಶಕಗಳಿಂದ ಹೋರಾಟ ನಡೆದಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಚುನಾವಣೆಯ ಪೂರ್ವ ಚಿಕ್ಕೋಡಿ ಜಿಲ್ಲೆಯಾಗಿ ಮಾಡುತ್ತೇವೆ ಎಂದು ಅಶ್ವಾಸನೆಗಳನ್ನು ಮಾತ್ರ ಕೊಡುತ್ತಾ ಬಂದಿದ್ದಾರೆ. ತಾವೂ ಸಹ ಚುನಾವಣೆಯ ಪೂರ್ವ ಅಶ್ವಾಸನೆ ನೀಡಿದ್ದೀರಿ. ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಇವರೂ ಸಹ ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಆಸಕ್ತಿ ತೋರಿದ್ದಾರೆ. ತಾವು ಮನಸ್ಸು ಮಾಡಿದರೆ ಮಾತ್ರ ಚಿಕ್ಕೋಡಿ ಜಿಲ್ಲೆಯಾಗಲು ಸಾಧ್ಯ. 20 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸುವುದು ಪ್ರಮುಖವಾಗಿದೆ. ಚಿಕ್ಕೋಡಿ ಜಿಲ್ಲೆಗಾಗಿ ಈಗಾಗಲೇ ಹಲವಾರು ಸ್ವಾಮಿಜೀಗಳು, ಸಂಘ-ಸಂಸ್ಥೆಗಳು, ಹಿರಿಯರು, ಮುಖಂಡರು ಸಾಕಷ್ಟು ಸಲ ಒತ್ತಾಯಿಸಿದ್ದಾರೆ. ಪ್ರತಿಭಟನೆಗಳನ್ನೂ ಸಹ ಮಾಡಿದರೂ ಕೂಡಾ ಚಿಕ್ಕೋಡಿ ಜಿಲ್ಲೆಯಾಗಿಸುವ ಬಗ್ಗೆ ಆಸಕ್ತಿಯನ್ನು ತೋರಿಸಿರುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ತಮ್ಮ ಅಧಿಕಾರವಧಿಯಲ್ಲಿ ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸಬೇಕೆಂದು ಚಿಕ್ಕೋಡಿ ಭಾಗದ ಜನತೆಯ ಹಾಗೂ ಸಂಘ-ಸಂಸ್ಥೆಗಳ ಪರವಾಗಿ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು.  

ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿಯವರು ಮನವಿಯನ್ನು ಸ್ವೀಕರಿಸಿ ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸುವಂತೆ ಈ ಹಿಂದೆಯೂ ಶ್ರಮಿಸಿದ್ದೇವೆ, ಈಗಲೂ ಪ್ರಾಮಾಣಿಕವಾಗಿ ಶ್ರಮಿಸುತ್ತವೆ ಎಂದು ಭರವಸೆ ನೀಡಿದರು.  

ರವೀಂದ್ರ ಹಂಪಣ್ಣವರ, ಕಾಶೀನಾಥ ಕುರಣಿ, ಸಂಜು ಬಡಿಗೇರ, ಚಂದ್ರಕಾಂತ ರು. ಹುಕ್ಕೇರಿ, ಬಸವರಾಜ ಸಾಜನೆ, ಖಾನಪ್ಪಾ ಬಾಡಕರ, ಪ್ರತಾಪಗೌಡಾ ಪಾಟೀಲ, ಮಹೇಶ ಕಾಂಬಳೆ. ಮಾಳು ಶಿರನೂರೆ, ಮಹಾದೇವ ಪೂಜಾರಿ ಮುಂತಾದವರಿದ್ದರು. 


ಸುದ್ದಿ ಓದಿ