ಜನರ ಹಣವನ್ನು ಒಳ್ಳೆಯದಕ್ಕೆ ಬಳಕೆ ಮಾಡಬೇಕು:ವಿ.ಎಸ್.ಪಾಟೀಲ
ಲೋಕದರ್ಶನ ವರದಿ
ಮುಂಡಗೋಡ:ಶಾಸಕರಾಗಿದ್ದಾಗ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ ವಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆ ನಡೆಸಿ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೆಲವು ಜನಪ್ರತಿನಿಧಿಗಳು ವಿರೋಧ ಪಕ್ಷದವರಿಗೆ ಕಿರುಕುಳ ನೀಡುವುದು ಹೆಚ್ಚಾಗಿದ್ದು ಇದರಿಂದ ಜನರೇ ಬೇಸತ್ತಿದ್ದಾರೆ. ಹತ್ತು ವರ್ಷದಲ್ಲಿ ಎಷ್ಟು ಆಶ್ರಯ ಮನೆಗಳನ್ನು ಕೊಟ್ಟಿದ್ದಾರೆ ಎಂದು ಅವರಿಗೆ ಕೇಳಬೇಕು. ನನ್ನ ಅಧಿಕಾರದ 5 ವರ್ಷದ ಅವಧಿಯಲ್ಲಿ ಹನ್ನೊಂದು ಸಾವಿರ ಮನೆಗಳನ್ನು ನೀಡಿದ್ದೇವೆ. ಗ್ರಾಮ ಪಂಚಾಯಿತಿ ಮುಖಾಂತರ ಬಡವರಿಗೆ ಮನೆಗಳನ್ನು ನೀಡಿದ್ದೇವೆ. ಆದರೆ ಕೃಷಿ ಇಲಾಖೆಯಲ್ಲಿ ತಾಡಪತ್ರಿ ನೀಡಲು ಸಹ ಶಾಸಕರ ಪತ್ರ ತೆಗೆದುಕೊಂಡು ಹೋಗಬೇಕು. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆಯವರು ಬೇರೆಯವರ ಮನೆಯಲ್ಲಿ ತಾಡಪತ್ರಿಗಳನ್ನು ಇಟ್ಟು ಹಂಚಿಕೆ ಮಾಡಿರುವುದನ್ನು ನಾವು ಕೇಳಿದ್ದೇವೆ. ಸರ್ಕಾರದ ಹಣವೆಂದರೆ ಅದು ಜನರ ಹಣ ಎನ್ನುತ್ತೇವೆ. ಜನರ ಹಣವನ್ನು ಒಳ್ಳೆಯದಕ್ಕೆ ಬಳಕೆ ಮಾಡಬೇಕು. ಕೆರೆ ತುಂಬಿಸುವ ಯೋಜನೆಯ ಸರ್ಕಾರದ ಹಣವನ್ನು ಅನವಶ್ಯವಾಗಿ ಬಳಕೆ ಮಾಡಲಾಗಿದೆ. ಈ ಯೋಜನೆಯಿಂದ ರೈತರಿಗೆ ಯಾವುದೆ ಪ್ರಯೋಜನವಾಗುವುದಿಲ್ಲ.
ಸದ್ಯಕ್ಕೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಪಟ್ಟಿಯಲ್ಲಿ ನನ್ನ ಹೆಸರು ಇದ್ದು 2-3 ದಿನಗಳಲ್ಲಿ ನನ್ನ ಹೆಸರು ಅಂತಿಮವಾಗುತ್ತದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾದ ವಾತಾವರಣವಿದೆ. ಕ್ಷೇತ್ರದಲ್ಲಿ ಎಲ್ಲ ಪಂಚಾಯಿತಿ ವ್ಯಾಪ್ತಿಗಳಿಗೆ ಭೇಟಿ ನೀಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಉತ್ತಮ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಈ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡುತ್ತಾ ಬಂದಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯನ್ನು ಹೊರತು ಪಡಿಸಿದರೆ ಉಳಿದೆಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾದ ಬೆಂಬಲ ದೊರೆತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತದೆ ಎಂದರು.
ಈ ವೇಳೆ ಯುವ ಕಾಂಗ್ರೆಸ್ ಕ್ಷೇತ್ರದ ವೀಕ್ಷಕ ಪುನೀತ ಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಎಚ್.ಎಮ್.ನಾಯ್ಕ, ರಾಮಕೃಷ್ಣ ಮೂಲಿಮನಿ, ವಾದಿರಾಜ ಅಡ್ಡೆ, ರಾಜಶೇಖರ ಹಿರೇಮಠ, ಧರ್ಮರಾಜ ನಡಿಗೇರ, ಬಸವರಾಜ ನಡುವಿನಮನಿ, ಮಹಮ್ಮದ್ಜಾಫರ್ ಹಂಡಿ, ಮಹಮ್ಮದ್ಗೌಸ್ ಮಕಾಂದಾರ ಹಾಗೂ ಮುಂತಾದವರಿದ್ದರು.