ಧಾರ್ಮಿಕ ಗುರುಗಳ ಸಂದೇಶಗಳಿಂದ ಸಮಾಜದಲ್ಲಿ ಶಾಂತಿ ಸಾಧ್ಯ: ನಿಂಬರಗಿ
ಲೋಕದರ್ಶನ ವರದಿ
ಸಂಕೇಶ್ವರ 26: ಶರಣರು, ಸಂತರು, ಮಠಾಧೀಶರು, ವಿವಿಧ ಧರ್ಮಗಳ ಧಾರ್ಮಿಕ ಗುರುಗಳ ಸಂದೇಶಗಳು ಸಮಾಜದಲ್ಲಿ ಏಕತೆಯ ಜೊತೆಗೆ ಸಮಾಜದಲ್ಲಿ ಶಾಂತಿ ಸಹಿಷ್ಣುತೆಗಳು ಸಾಧ್ಯವಾಗುತ್ತವೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿಮತ ವ್ಯಕ್ತಪಡಿಸಿದರು.
ಶುಕ್ರವಾರ ನಿಡಸೋಸಿ ಸಿದ್ಧ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ವಿವಿಧ ಧರ್ಮ ಗುರುಗಳ ಸಂದೇಶಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಅನುಕೂಲ ಒದಗಿಸಿವೆ. ನಿಡಸೋಸಿ ಮಠದ ಪೂಜ್ಯರು ನೀಡಿದ ಜಾತ್ಯಾತೀತ ಸಂದೇಶ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದರು.
ಇದೇ ವೇಳೆ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಪೊಲೀಸ ಇಲಾಖೆಯಿಂದ ಜನರಿಗೆ ಕಾನೂನಿನ ನೆರವಿನ ಜೊತೆಗೆ ರಕ್ಷಣೆ ಸಿಗುತ್ತಿದ್ದು, ಗಡಿಯಲ್ಲಿರುವ ಯೋಧರಷ್ಡೇ ಪೊಲೀಸರ ಕಾರ್ಯವೂ ಪವಿತ್ರವಾಗಿದೆ. ಲಕ್ಷ್ಮಣ ನಿಂಬರಗಿ ಅವರು ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಎಸ್ಪಿ ನಿಂಬರಗಿ ಅವರನ್ನು ಶಾಲು ಹೊದಿಸಿ, ಹಾರ ಹಾಕಿ, ಸಾವಯವ ಬೆಲ್ಲ, ಪುಸ್ತಕ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಿಪಿಐಗಳಾದ ಪ್ರಲ್ಹಾದ ಚನ್ನಗಿರಿ, ರಾಜುಗೌಡ ಪಾಟೀಲ ರಾಯಬಾಗ ವಲಯ ಅರಣ್ಯಾಧಿಕಾರಿ ಸುನೀತಾ ಉಪಸ್ಥಿತರಿದ್ದರು.