ಶಿಕ್ಷಣ, ಸಂಸ್ಕಾರದ ಆಲಯ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ
ನೀ ನೆಟ್ಟ ಸಸಿಯು ಹೆಮ್ಮರವಾಗಿ ನೀ ಬೆಳಗಿನ ಹಣತೆ ಶಿಕ್ಷಣದ ಜ್ಯೋತಿಯಾಗಿ ನೀ ಪಡೆದ ಗುರುದೀಕ್ಷೆ, ಬಳಗಕ್ಕೆ ಶ್ರೀರಕ್ಷೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ 1008 ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳರವರ ಆಶೀರ್ವಾದದೊಂದಿಗೆ 1946ರಲ್ಲಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗವು ಲಕ್ಷ್ಮೇಶ್ವರ ನಗರದಲ್ಲಿ ಬೆಳಕು ಕಂಡಿತು. ಶ್ರೀಗಳ ಆಶೀರ್ವಾದದ ಶಕ್ತಿಯಿಂದಾಗಿ ಪ್ರಥಮ ಹಂತದಲ್ಲಿ ಶ್ರಾವಣ ಮಾಸದ ಪುರಾಣ ಕಾರ್ಯಕ್ರಮ, ಗೌರಿ ಹುಣ್ಣಿಮೆಯ ಕಾರ್ಯಕ್ರಮ ಹೀಗೆ ಮಹಿಳಾ ಕಾರ್ಯಕ್ರಮಗಳನ್ನು ಮಾಡುತ್ತ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ಉಕ್ತಿಗೆ ಅನುಸಾರವಾಗಿ 1965 ರಲ್ಲಿ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಶಾಲೆಯನ್ನು ಪ್ರಾರಂಭಿಸಲಾಯಿತು. ತದನಂತರ 1966ರಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸುವುದರ ಮೂಲಕ ಶಿಕ್ಷಣ ರಂಗದಲ್ಲಿ ಪಾದಾರ್ಪಣೆ ಮಾಡಿತು. ಸಂಸ್ಕೃತಿಯಿಂದಲೇ, ಸಂಸ್ಕೃತಿಯ ರಕ್ಷಣೆ ಎಂಬ ಲಿಂ. ಪೂಜ್ಯ ಶ್ರೀ ವೀರಗಂಗಾಧರ ಮಹಾಸ್ವಾಮಿಗಳ ಆಶೀರ್ವಾದದ ವಾಣಿಯೊಂದಿಗೆ ಸ್ಥಾಪಿಸಲ್ಪಟ್ಟ ಈ ಪಾಠಶಾಲೆಯು 1979ರಲ್ಲಿ ಸರ್ಕಾರದಿಂದ ಅನುದಾನಕ್ಕೆ ಒಳಪಟ್ಟ ಉತ್ತರ ಕರ್ನಾಟಕದ ಏಕೈಕ ಅನುದಾನಿತ ಬಾಲಕಿಯರ ಪಾಠಶಾಲೆಯಾಗಿ ಬೆಳಕಿಗೆ ಬಂದಿತು.
ಶಿಕ್ಷಣ ಸಂಸ್ಕೃತಿ, ಸಂಸ್ಕಾರದ ಆಲಯವಾದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗವು 1967ರಲ್ಲಿ ಚಿಕ್ಕಮಕ್ಕಳಿಗಾಗಿ ಆರು ದಶಕಗಳ ಹಿಂದಿನ ನಗರದ ಶಿಶು ವಿಹಾÀರದ ಕೊರತೆಯನ್ನು ಕಂಡು ಪೂರ್ವ ಪ್ರಾಥಮಿಕ ಶಾಲೆಯನ್ನು ಬಳಗದ ಮಾತೆಯರು ಪ್ರಾರಂಭಿಸಿದರು. ಇದಕ್ಕೆ 2001ರಲ್ಲಿ ಶ್ರೀಮತಿ ವೀರಮ್ಮ ಚನಬಸಯ್ಯ ಲಿಂಬÀಯ್ಯಸ್ವಾಮಿಮಠ ಪೂರ್ವ ಪ್ರಾಥಮಿಕ ಶಾಲೆಯಂದು ನಾಮಕರಣ ಮಾಡಲಾಯಿತು. ತದನಂತರ ಸಂಸ್ಥಾಪಕ ಅಧ್ಯಕ್ಷಣೀಯಾದ ಶ್ರೀಮತಿ ಪಾರ್ವತಿಬಾಯಿ ಶಂ ಬಹದ್ದೂರದೇಸಾಯಿಯವರ ಹೆಸರಿನಲ್ಲಿ ಲಿಂಗೈಕ್ಯ ಜಗದ್ಗುರು ಮರಳಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉಜ್ಜಯಿನಿ ಇವರ ಆಶೀರ್ವಾದದಿಂದ ಬಾಲಕಿಯರ ಪ್ರೌಢಶಾಲೆಯು ಕೂಡಾ ಆರಂಭವಾಗಿ ಅನುದಾನವನ್ನು ಪಡೆಯಿತು. ಧರ್ಮದ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿತವಾದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣದ ವಿಚಾರಗಳಿಗೆ ಸ್ಪಂದಿಸಿ ಶ್ರೀ ಗುರು-ಹಿರಿಯರ ಆಶೀರ್ವಾದದಿಂದ ದಿ. 02-06-1984 ರಲ್ಲಿ ಪ್ರಚಲಿತ ಸಮುದಾಯಕ್ಕೆ ಅವಶ್ಯಕವಿದ್ದ ಕ್ವಾನೆಂಟ್ ಮಾದರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಲಾಯಿಸಿತು. ತದನಂತರ 1985ರಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜ್‍ನ ಅವಶ್ಯಕತೆಯನ್ನು ಮನಗಂಡು ಶ್ರೀಮದ್ ರಂಭಾಪುರು ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯವು ಪ್ರಾರಂಭಿಸಲ್ಪಟ್ಟಿತು. ಹೀಗೆ ಕಾಮಧೇನು ಕಲ್ಪವೃಕ್ಷದಂತೆ ಬೆಳೆದ ತಾಯಿಯ ಬಳಗವು 1995ರಲ್ಲಿ ಮಹಿಳೆಯರಿಗಾಗಿ ಶ್ರೀಮತಿ ಅನ್ನಪೂರ್ಣಬಾವಿ ಕಾಶಪ್ಪಗೌಡ ಬಹದ್ದೂರದೇಸಾಯಿಯವರ ಹೆಸರಿನಲ್ಲಿ ಮಹಿಳಾ ವೃತ್ತಿಶಿಕ್ಷಣ ವಿಭಾಗ ಪ್ರಾರಂಭಿಸಲಾಯಿತು.
ಉತ್ತರ ಕರ್ನಾಟಕದಲ್ಲಿ ಲಕ್ಷ್ಮೇಶ್ವರದಂತಹ ನಗರದಲ್ಲಿ ಕಳೆದ 6-7 ದಶಕಗಳಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ನಡೆಸುವುದು ಅಸಾಧ್ಯವೆಂದು ಮಾತು ಕೇಳಿ ಬರುತ್ತಿತ್ತು. ಅದರ ಮಧ್ಯದಲ್ಲಿಯೇ ಅಸಾಧ್ಯವೆಂಬುದನ್ನು ಸಾಧಿಸಿ ತೋರಿಸಿ ಮಕ್ಕಳ ಬಳಗವನ್ನು ಕಟ್ಟಿದ ಮಾತೆಯರು ಶಿಕ್ಷಣ ಸಂಸ್ಥೆಯಲ್ಲಾದ ಬದಲಾವಣೆಯಾದ ಅಂಶಗಳನ್ನು ಗಮನಿಸಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಜಾಗೆಯ ಕೊರತೆ ಕಂಡು ಬರತೊಡಗಿತು. ಹೀಗೆ ಮಕ್ಕಳಿಗೆ ಸೂಕ್ತವಾದ ಆಟದ ಮೈದಾನ, ನೂತನ ಕೊಠಡಿಗಳು, ಹಾಗೂ ಪಿಠೋಪಕರಣಗಳ ಸಮಸ್ಯೆ ಕಂಡು ಬರುತ್ತಿದ್ದಾಗ ಇದೆಲ್ಲವನ್ನು ಅರಿತು ಬಂದಿರುವ ಸಮಸ್ಯೆಗಳನ್ನು ಸೂಕ್ತವಾಗಿ ಪರಿಗಣಿಸಿ ಅದಕ್ಕೆ ಪರಿವಾರ ಎಂಬಂತೆ ಲಕ್ಷ್ಮೇಶ್ವರ ಪಟ್ಟಣದ ಮಧ್ಯಭಾಗದಲ್ಲಿರುವ ಸುಮಾರು 53 ಗುಂಟೆ ವಿಶಾಲ ಮೈದಾನವನ್ನು ಬಳಗದ ಶಾಲಾ ಮಧ್ಯದಲ್ಲಿಯೇ ಇರುವ ತೋಟ ದೇವರ ಮಠದ ಪ್ರಾಂಗಣವನ್ನು ಕೊಂಡುಕೊಳ್ಳಲು ಕೊಲ್ಲಾಪೂರದ ಶ್ರೀ ಮ.ನಿ.ಪ್ರ. ಚಂದ್ರಶೇಖರ ದೇವರು ತೋಟದೇವರ ಮಠ ಇವರ ಸನ್ನಿಧಿಗೆ ಹೋಗಿ ಬಳಗದ ಪರವಾಗಿ ವಿಶಾಲ ಮೈದಾನದ ಕುರಿತು ಮನವಿ ಮಾಡಿಕೊಂಡಾಗ ಶ್ರೀಗಳು ಬಳಗದ ಸದುದ್ದೇಶವನ್ನು ಮನವರಿತು ಕೂಡಲೇ ಅಪ್ಪಣೆ ಕೊಟ್ಟರು. ಅಂದಿನಿಂದ 53 ಗುಂಟೆಯ ಪ್ರಾಂಗಣವು ಬಳಗದ ಪರವಾಯಿತು. ತೋಟದೇವರ ಮಠದ ಸನ್ನಿಧಿಯಲ್ಲಿಯೇ ಇವತ್ತು ಎಸ್.ಟಿ.ಪಿ.ಎಂ.ಬಿ. ಕಾನ್ವಮೆಂಟ್ ಶಾಲೆ (ಇಂಗ್ಲಿಷ್ ಮೀಡಿಯಂ) ಹಾಗೂ ಮಹಿಳಾ ಪದವಿ ಮಹಾವಿದ್ಯಾಲಯ ನಿರ್ಮಾಣವಾಗಿದ್ದು ಸುಸಜ್ಜಿತವಾದ ಕಟ್ಟಡದಿಂದ ಕೂಡಿವೆ.
ಕಳೆದ 6-7 ದಶಕಗಳಿಂದ ಮಹಿಳೆಯರಿಂದ ಸ್ಥಾಪಿತವಾಗಿ ಮಹಿಳಾ ಕಲ್ಯಾಣ ಶಿಕ್ಷಣ ಸೇವೆಗಳನ್ನು ಮಾಡುತ್ತ ಉತ್ತರ ಕರ್ನಾಟಕದ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿ ಬೆಳೆದು ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಮುನ್ನಡೆಯುತ್ತ ಇಂದು ಶಿಕ್ಷಣ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕೀರ್ತಿ ಶ್ರೀತಾಯಿ ಮಕ್ಕಳ ಬಳಗ ಲಕ್ಷ್ಮೇಶ್ವಕ್ಕೆ ಸಲ್ಲುತ್ತದೆ. ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆಯನ್ನು ಲಕ್ಷ್ಮೇಶ್ವರದ ಮಧ್ಯಭಾಗದಲ್ಲಿ ತೆರವುದರ ಮೂಲಕ ಹೆಣ್ಣು ಮಕ್ಕಳ ಕನಸು ನನಸು ಮಾಡಿದ ಬಳಗ ಬೆಳಗಿದ ಎಲ್ಲ ಮಾತೆಯರಿಗೂ ಹಾಗೂ ನೂತನ ಬಳಗದ ಸದಸ್ಯರಿಗೂ ಸಂಸ್ಥೆಯ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲ ಆಡಳಿತಾಧಿಕಾರಿಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಚನ್ನಬಸಯ್ಯ ಹಿರೇಮಠ
ಕನ್ನಡ ಉಪನ್ಯಾಸಕರು,
ಎಸ್.ಟಿ.ಪಿ.ಎಂ.ಬಿ. ಪದವಿ ಮಹಿಳಾ ಮಹಾವಿದ್ಯಾಲಯ ಲಕ್ಷ್ಮೇಶ್ವರ
ಮೊ: 8722727937