ಮುಂಗಾರು ಅಧಿವೇಶನ: ಸಂಸತ್ ಭವನ ಸ್ವಚ್ಚ
ನವದೆಹಲಿ, ಸೆಪ್ಟೆಂಬರ್ 13: ಕೋವಿಡ್ ಭೀತಿಯ ನಡುವೆ ಸೋಮವಾರದಿಂದ ಸಂಸತ್ನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಸಂಸತ್ ಭವನವನ್ನು ಸ್ಯಾನಿಟೈಸ್ ಮಾಡಿ ಸ್ವಚ್ಚಗೊಳಿಸಲಾಗಿದೆ.
ಸಂಸತ್ ಭವನದ ಸ್ಚಚ್ಛತೆಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ 40 ಸದಸ್ಯರ ವಿಶೇಷ ತಂಡ ರಚನೆ ಮಾಡಿದೆ. ಒಂದು ಹಂತದ ಸ್ಯಾನಿಟೈಸ್ ಪ್ರಕ್ರಿಯೆ ಈಗಾಗಲೇ ಅಂತ್ಯಗೊಂಡಿದೆ.
ಸಂಸತ್ ಭವನದ ಸಿಬ್ಬಂದಿಗೆ 10 ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಸೋಮವಾರದಿಂದ ಅಕ್ಟೋಬರ್ 1ರ ತನಕ ಅಧಿವೇಶನ ನಡೆಯಲಿದ್ದು, ನಿರಂತರವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.
ಪ್ರತಿ ದಿನ ಬೆಳಗ್ಗೆ ಅಧಿವೇಶನ ಆರಂಭವಾಗುವ ಮುನ್ನ, ಒಂದು ವೇಳೆ ಕಲಾಪ ಮುಂದೂಡಲ್ಪಟ್ಟರೆ, ಕಲಾಪ ಅಂತ್ಯಗೊಂಡ ಬಳಿಕ ಮತ್ತೆ ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯಲಿದೆ.