ವಿದ್ಯಾರ್ಥಿ ಜೀವನದಲ್ಲಿ ಪೋಷಕರು, ಗುರುಗಳು ಪ್ರಮುಖರು: ನಾಮದೇವ
ಲೋಕದರ್ಶನ ವರದಿ
ರಾಣೇಬೆನ್ನೂರು: ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪೋಷಕರು ಮತ್ತು ಗುರುಗಳು ಮಹತ್ತರ ಪಾತ್ರ ನಿರ್ವಹಿಸುತ್ತಾರೆ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲಿ ಕಲಾಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಾಗದ ಸಾಂಗತ್ಯ ವೇದಿಕೆಯ ಅಧ್ಯಕ್ಷ, ಕಲಾವಿದ ನಾಮದೇವ ಕಾಗದಗಾರ ಹೇಳಿದರು.
ಅವರು ತಾಲೂಕಿನ ನಂದಿಗಾವಿ ಗ್ರಾಮದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಮಠದ(ಶ್ರಿ ಗುರು ಕೊಟ್ರ್ಪಜ್ಜನ ಗದ್ದುಗೆ) ಆವರಣದಲ್ಲಿ ವೇದಿಕೆಯು ಆಯೋಜಿಸಿದ್ದ ಮಕ್ಕಳಿಗಾಗಿ ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್"- ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪದವಿ ಪಡೆದುಕೊಂಡರೇ ಸಾಲದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ನಂತರ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು. ಶಿಕ್ಷಣ ನಿರಂತರ ಕಲಿಕೆಯ ಪ್ರಕ್ರಿಯೆ. ಕಲಾಶಿಕ್ಷಣ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳಿಗೆ ಮೂರ್ತ ಸ್ವರೂಪವನ್ನು ಸೃಷ್ಟಿಸುತ್ತದೆ. ಸ್ಮರಣ ಶಕ್ತಿ ಹೆಚ್ಚಿಸುವುದಲ್ಲದೇ ರೂಪರಚನಾ ಸಾಮರ್ಥ್ಯ ಕಡಿಮೆ ಇರುವ ಹಾಗೂ ಬೌದ್ಧಿಕವಾಗಿ ಮಂದವಾಗಿರುವ ಮಕ್ಕಳಿಗೆ ಮಹತ್ವದ್ದಾಗಿದೆ ಎಂದರು.
ಚಿತ್ರ ಸ್ಪರ್ಧೆಯಲ್ಲಿ ಅಂಚೆಕಾರ್ಡಿನಲ್ಲಿ ಅಂಬೇಡ್ಕರ್ ಚಿತ್ರ ರಚಿಸಿ ಪ್ರಶಸ್ತಿ ವಿಜೇತರಾದ ಶಿವಮೊಗ್ಗದ ಫೇಸ್ ಯು.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ವೈಷ್ಣವಿ.ಬಿ ಇವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅಥಿತಿಯಾಗಿದ್ದ ಕವಿ ದೇವರಾಜ ಹುಣಸಿಕಟ್ಟಿ ಅವರು
ಕೊರೋನಾ ಕಾಲದಲ್ಲಿ ಮುನ್ನಲೆಗೆ ಬಂದ ಆನ್ಲೈನ್ ಶಿಕ್ಷಣ ಮಕ್ಕಳಿಗೆ ಪೂರಕವು ಹೌದು, ಎಚ್ಚರ ತಪ್ಪಿದರೆ ಮಾರಕವು ಹೌದು. ಆನ್ಲೈನ್ ಮೂಲಕ ಚಿತ್ರಕಲೆಯ ಹೊಸಸಾಧ್ಯತೆಗಳನ್ನು ವಿದ್ಯಾಥಿಗಳಿಗಳಲ್ಲಿ ಅನಾವರಣಗೊಳಿಸಲು ಸಾಧ್ಯವಾಗಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಪಿ.ಭೀಮೇಶ, ದೀಪಾ.ಪಿ, ವರ್ಷಿಣಿ.ಬಿ, ಕೃಷ್ಣಮೂರ್ತಿ ಬಳಿಗಾರ, ಆರ್.ಬಿ.ಪಾಟೀಲ್, ಸವಿತಾ ಮಲ್ಲಾಡದ ಸೇರಿದಂತೆ ಮತ್ತಿತರ ಗಣ್ಯರು ಕಲಾವಿದರು ಉಪಸ್ಥಿತರಿದ್ದರು.