ಪದ್ಮಭೂಷಣ ಪುರಸ್ಕಾರ ಹಿಂದಿರುಗಿಸಲು ಪ್ರಕಾಶ್ ಸಿಂಗ್ ಬಾದಲ್ ನಿರ್ಧಾರ
ನವದೆಹಲಿ, ಡಿ 3:ಕೇಂದ್ರ
ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು
ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ, ತಮಗೆ ನೀಡಿರುವ
ಪದ್ಮಭೂಷಣ ಪುರಸ್ಕಾರವನ್ನು ಸರ್ಕಾರಕ್ಕೆ ವಾಪಸ್
ನೀಡುತ್ತಿರುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪ್ರಕಟಿಸಿದ್ದಾರೆ.
ಈ ಸಂಬಂಧ ಅವರು ರಾಷ್ಟ್ರಪತಿ ಭವನಕ್ಕೆ ಪತ್ರ ಬರೆದಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿಷಯದಲ್ಲಿ ಕೇಂದ್ರ ಸರ್ಕಾರದ ಧೋರಣೆ ತಮಗೆ ಆಶ್ಚರ್ಯ ತಂದಿದೆ ಎಂದು ಬಾದಲ್ ಪತ್ರದಲ್ಲಿ ನೋವು ವ್ಯಕ್ತಪಡಿಸಿದ್ದಾರೆ.ದೇಶದ ಜನಸಂಖ್ಯೆಯಲ್ಲಿ ಶೇ 70ರಷ್ಟಿರುವ ರೈತರ ಪರವಾಗಿ ತಾವು ಈ ಪತ್ರ ಬರೆಯುತ್ತಿರುವುದಾಗಿ, 70 ವರ್ಷಗಳಿಂದ ದೇಶದ ರೈತರನ್ನು ಅನ್ನದಾತರು ಎಂದು ಕೊಂಡಾಡಲಾಗುತ್ತಿದೆ ಎಂದು ಅವರು ಸ್ಮರಿಸಿದ್ದಾರೆ. ವಿದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಿಂದ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ದೇಶವನ್ನು ತಲುಪಿಸಿದ್ದು, ರೈತರು ಎಂದು ಅವರು ಹೇಳಿದ್ದಾರೆ.ಅಂತಹ ರೈತರು ಈಗ ತಮ್ಮ ಹಕ್ಕುಗಳಿಗಾಗಿ ರಸ್ತೆಗಳಿಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಬಾದಲ್ ಪತ್ರದಲ್ಲಿ ಹೇಳಿದ್ದಾರೆ.