ಸಂಘ-ಸಂಸ್ಥೆಗಳು ಸಾಮಾಜಿಕ ಹೊಣೆ ಅರಿತು ಕರ್ತವ್ಯ ನಿರ್ವಹಿಸಬೇಕು: ಕುಲಕರ್ಣಿ
ಲೋಕದರ್ಶನ ವರದಿ
ರಾಣೇಬೆನ್ನೂರು 30; ಸಾರ್ವಜನಿಕ ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆ ಅರಿತು ನಡೆದಾಗ ತಮ್ಮ ಉದ್ದೇಶಿತ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ, ಅಂತಹ ಸೇವಾ ಸಂಸ್ಥೆಗಳ ಸಾಲಿನಲ್ಲಿ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಹ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರ ಮೂಲಕ ರೈತರು, ರೈತ ಕಾರ್ಮಿಕರು, ಕನ್ನಡಿಗರು ಸಮಾಜಮುಖಿಯಲ್ಲಿ ಮುಂಚೂಣಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಲಿದೆ ಎಂದು ಹಾವೇರಿಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಅವರು ಇಲ್ಲಿನ ವಿದ್ಯಾನಗರದ ನಿವೃತ್ತ ನೌಕರರ ಭವನದಲ್ಲಿ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ 2 ದಿನಗಳ ಕೋವಿಡ್-19 ಮಕ್ಕಳ ಶೈಕ್ಷಣಿಕ ಟೇರ್ ಡೆಸ್ ಹೋಮ್ಸ್ ಮಕ್ಕಳ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಸರಿಯಾದ ಮಾಹಿತಿ, ಮಾರ್ಗದರ್ಶನವಿಲ್ಲದೇ ಬದುಕು ಕಟ್ಟಿಕೊಳ್ಳಲು ನಿತ್ಯವು ಹೆಣಗಾಡುತ್ತಿದ್ದಾರೆ. ಅಂತಹವರ ಪ್ರಗತಿಗಾಗಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರವನ್ನು ನೀಡುವುದರ ಮೂಲಕ ಅವರ ಬದುಕಿಗೆ ಮತ್ತು ಭವಿಷ್ಯಕ್ಕೆ ಮಾರ್ಗದರ್ಶಕರು ಆಗಬೇಕು ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಅವರು ಮಾತನಾಡಿ, ಜೀವನ ಪ್ರೀತಿಸುವ ಜೊತೆಗೆ ಹಸನ್ಮುಖಿಯಾಗಿ ಸಾಮಾಜಿಕ ಸೇವಾ ಸಂಘಟನೆಗಳು ಕೆಲಸಮಾಡಬೇಕು ಕಾರಣ ಸಾರ್ವಜನಿಕೆ ಸೇವೆ ಎಂದರೆ ಜನಹಿತ ಬಯಸುವಂತಹ ಕೆಲಸ. ವಿಶೇಷವಾಗಿ ಅಂಗನವಾಡಿ, ಆಶಾ ಕಾರ್ಯಕರ್ತರು ತಮ್ಮ ಸೇವೆಯಲ್ಲಿ ಖುಷಿಯಾಗಿ ಕೆಲಸಮಾಡಿದಾಗ ಇಡೀ ಸಮಾಜ ಸಂತೋಷದಿಂದ ಬದುಕಿ ಬಾಳಲು ಸಾಧ್ಯವಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಧಿಕಾರಿ ಜಯಶ್ರೀ ಪಾಟೀಲ ಅವರು ಮಕ್ಕಳ ಹಕ್ಕು ನಿರ್ವಹಣೆ ಅದಕ್ಕೆ ಸಂಬಂಧಪಟ್ಟ ಕಾನೂನು ಹಾಗೂ ವಿಶೇಷವಾಗಿ ಬಾಲನ್ಯಾಯಮಂಡಳಿ ಕುರಿತು ಉಪನ್ಯಾಸ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮುಖ್ಯಸ್ಥ ಎಸ್.ಡಿ.ಬಳಿಗಾರ ಅವರು ಕಳೆದ 20 ವರ್ಷಗಳ ಅವಧಿಯಲ್ಲಿ ತಮ್ಮ ಸಂಸ್ಥೆಯು ನಿರ್ಲಕ್ಷಿತ ಮಹಿಳೆಯರು, ಮಕ್ಕಳು ಹಾಗೂ ಕೊವಿಡ್ ಕರಾಳತೆಯಲ್ಲಿ ಬೆಂದವರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಇದಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಉದ್ದೇಶಿತ ಯೋಜನೆ ಜಾರಿಗೊಳಿಸುವಲ್ಲಿ ಸಹಕಾರಿಗಳಾಗಿದ್ದಾರೆ. ಅದಕ್ಕಾಗಿ ತಾವು ಸದಾ ಅಭಿನಂದಿಸುವುದಾಗಿ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಾಮಾಜಿಕ ಸೇವಾ ಕಾರ್ಯಕರ್ತರಾದ ರೇಣುಕಾ ಗುಡಿಮನಿ ಮತ್ತು ಹಭಿಬ್ ಬಾನು ಹಾನಗಲ್, ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್ ನ ನಾಗಮಣಿ ಸೇರಿದಂತೆ ಮತ್ತಿತರ ಗಣ್ಯರು, ವನಸಿರಿ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸ್ವಯಂ ಸೇವಕರು ಉಪಸ್ಥಿತರಿದ್ದರು. ಜೆ.ಪಿ ನಧಾಪ್ ಸ್ವಾಗತಿಸಿ, ಬಸವರಾಜ ಕೆ ನಿರೂಪಿಸಿ ವಂದಿಸಿದರು. ಕಮ್ಮಟದಲ್ಲಿ ನೂರಾರು ಮಕ್ಕಳು ಉಪಸ್ಥಿತರಿದ್ದರು.