ಸಮಾಜದ ಅಭಿವೃದ್ಧಿಗೆ ಸಾವಯವ ಕೃಷಿ ಅಗತ್ಯ: ಮಳಲಿ
ಲೋಕದರ್ಶನ ವರದಿ,
ಜಮಖಂಡಿ 23: ಭೂಮಿಯಲ್ಲಿ ಸತ್ವಾಂಶ ಕಡಿಮೆಯಾದರೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ. ಆದ್ದರಿಂದ ಸಾವಯವ ಕೃಷಿ ಕೈಗೊಂಡು ಭೂಮಿಯ ಫಲವತ್ತತೆ ಕಾಪಾಡುವುದರ ಜೊತೆಗೆ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ಬೆಳೆಯಬೇಕು ಎಂದು ಪಾರಂಪರಿಕ ಕೃಷಿಕ ಡಾ.ಹನಮಂತ ಮಳಲಿ ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಆಶ್ರಯದಲ್ಲಿ ಆಯೋಜಿಸಿದ್ದ ರೈತ ಮಹೋತ್ಸವವನ್ನು ಉದ್ಘಾಟಿಸಿ ಹಾಗೂ ಸಾವಯವ ಕೃಷಿ ಸಾಧಕ ದಂಪತಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು,
ವಿಜಯಪುರ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಎಚ್.ಟಿ. ಮಾತನಾಡಿ, ಮಣ್ಣು ರೈತನ ಕಣ್ಣು. ಆದರೆ, ಇತ್ತೀಚಿನ ಅವೈಜ್ಞಾನಿಕ ಕೃಷಿಯಿಂದ ಮನುಷ್ಯನಿಗೆ ರೋಗಗಳು ಬರುತ್ತಿವೆ. ದೇಶದ, ಸಮಾಜದ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಸಾವಯವ ಕೃಷಿ ಅಗತ್ಯವಿದೆ ಎಂದರು.
ಆಲಮೇಲದ ಸಾವಯವ ಕೃಷಿಕ ಸುನೀಲ ನಾರಾಯಣಕರ ಮಾತನಾಡಿ, ಸಾವಯವ ಕೃಷಿಯ ಉತ್ಪನ್ನಗಳಿಗೆ ರೈತರೆ ದರ ನಿಗದಿ ಮಾಡುವ ಅವಕಾಶವಿದೆ. ಆದ್ದರಿಂದ ಸಾವಯವ ಉತ್ಪನ್ನಗಳನ್ನು ಬೆಳೆದು ಮೌಲ್ಯವರ್ಧನ ಮಾಡಿ ಮಾರಾಟ ಮಾಡಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಸವರಾಜ ಸಿಂಧೂರ, ಮಾಜಿ ಜಿಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಬುಜುರುಕ ಮಾತನಾಡಿದರು, ರೂಗಿಯ ಅಡವಿ ಆಶ್ರಮದ ನಿತ್ಯಾನಂದ ಶ್ರೀಗಳು ಹಾಗೂ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾಲತಿಪ್ಪಿಯ ಚಿದಾನಂದ ಹಂದಿಗುಂದ, ಕುಳಲಿಯ ಶಿವಾನಂದ ಗಣಿ, ಸಸಾಲಟ್ಟಿಯ ಮಹಾದೇವ ಮಾಲಗಾಂವ, ಹುನ್ನೂರಿನ ಶಿವಾನಂದ ಜ್ಯೋತೆಪ್ಪನವರ, ಮರೇಗುದ್ದಿಯ ವೆಂಕಟೇಶ ಕನಕಣ್ಣವರ, ಸಾವಳಗಿಯ ತವನಪ್ಪ ಆಲಗೂರ ಹಾಗೂ ಬಬಲೇಶ್ವರದ ಲಕ್ಷ್ಮೀಬಾಯಿ ಶರಮಗೊಂಡ ಸಾವಯವ ಕೃಷಿಕ ದಂಪತಿಗಳನ್ನು ಸನ್ಮಾನಿಸಲಾಯಿತು.
ಧರೆಪ್ಪ ಕಿತ್ತೂರ, ಕಲ್ಮೇಶ ಯಲ್ಲಡಗಿ, ರುದ್ರ್ಪ ಝುಲಪಿ, ಹನಮಂತ ಅಂಕದ, ಭಾರತಿ ಅಂಕದ ಹಾಗೂ ಅನಸೂಯಾ ಅಂಕದ ಅವರನ್ನು ಗೌರವಿಸಲಾಯಿತು.
ಶಿವಾನಂದ ಬಾಡನವರ ಪ್ರಾರ್ಥನೆ ಗೀತೆ ಹಾಡಿದರು. ರಾಮಚಂದ್ರ ಬಾಡನವರ ರೈತಗೀತೆ ಹಾಡಿದರು. ಮುತ್ತು ಗೆದ್ದೆಪ್ಪನವರ ಸ್ವಾಗತಿಸಿದರು. ರುದ್ರ್ಪ ಝುಲಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲೇಶ ಗೆದ್ದೆಪ್ಪನವರ ನಿರೂಪಿಸಿದರು. ಮುತ್ತು ಸೊನ್ನದ ವಂದಿಸಿದರು.