ಹುಲ್ಲತ್ತಿ ಗ್ರಾಮದಲ್ಲಿ ಸ್ಮಶಾನ ಸ್ಥಳಾಂತರಕ್ಕೆ ಗ್ರಾಮಸ್ಥರ ವಿರೋಧ: ಧರಣಿ
ರಾಣೇಬೆನ್ನೂರ 03: ತಾಲೂಕಿನ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ಗ್ರಾಮಸ್ಥರು ಗ್ರಾಮದ ಸ್ಮಶಾನಕ್ಕೆ ಅಧಿಕೃತ ರಸ್ತೆ ನಿರ್ಮಾಣ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಮತ್ತು ಸ್ಮಶಾನ ಸ್ಥಳವನ್ನು ಸ್ಥಳಾಂತರಿಸಲು ಹೊರಟಿರುವ ಕ್ರಮವನ್ನು ವಿರೋಧಿಸಿ ಉಬಯ ಗ್ರಾಮಗಳ ನಾಗರಿಕರು ಪ್ರತಿಭಟಿಸಿ ರಾಣೇಬೆನ್ನೂರ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ತಮ್ಮ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡ ಜಗದೀಶ ಕೆರೂಡಿ ಅವರು ಹುಲ್ಲತ್ತಿ ಗ್ರಾಮ ಮತ್ತು ತಾಂಡಾ ಸೇರಿದಂತೆ ಒಟ್ಟು 1200ಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿವೆ. ಶೇ.80ರಷ್ಟು ಪ್ರಮಾಣದಲ್ಲಿ ಹಿಂದುಳಿದ ಪ.ಜಾತಿ, ಪ.ಪಂಗಡ ಸಮುದಾಯಗಳು ವಾಸಿಸುವ ಅತೀ ಹಿಂದುಳಿದ ಗ್ರಾಮವಾಗಿದೆ. 1917-18ನೇ ಸಾಲಿನಲ್ಲಿ ಸರ್ವೆ ನಂಬರ 109ರಲ್ಲಿ ಶವ ಸಂಸ್ಕಾರಕ್ಕಾಗಿ 24 ಗುಂಟೆ ಭೂಮಿಯನ್ನು ಮಂಜೂರ ಮಾಡಿ 104 ವರ್ಷಗಳು ಕಳೆದಿವೆ. ಇಲ್ಲಿಯವರೆಗೂ ಸ್ಮಶಾನಕ್ಕೆ ಸಾಗಲು ಅಧಿಕೃತ ರಸ್ತೆ ಇಲ್ಲ. ಇದಕ್ಕಾಗಿ ಅನೇಕ ಬಾರಿ ಹೋರಾಟ, ಪ್ರತಿಭಟನೆ, ಧರಣಿ, ಮನವಿ ಸಲ್ಲಿಕೆ ನಡೆಯುತ್ತಿದ್ದರೂ ಕ್ಯಾರೆ ಎನ್ನದ ಜಿಲ್ಲಾಡಳಿತವು ಗ್ರಾಮಸ್ಥರ ವಿರೋಧಿ ಧೋರಣೆ ಅನುಸರಿಸುತ್ತಿ ಎಂದು ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
2015ರಿಂದ ಸಂಬಂಧಪಟ್ಟಿ ಇಲಾಖೆಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿ ಅಧಿಕೃತ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. 2019ರಲ್ಲಿ ನಡೆದ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯನ್ನು ಅಂದು ಗ್ರಾಮಸ್ಥರು ಸಾಮೂಹಿಕವಾಗಿ ಬಹಿಸ್ಕಾರ ಮಾಡಿದ್ದರು. ಸ್ಥಳಕ್ಕೆ ದಾವಿಸಿದ ಚುನಾವಣಾಧಿಕಾರಿಗಳು ಗ್ರಾಮಸ್ಥರಲ್ಲಿ ಸಂಧಾನ ಸಭೆ ನಡೆಸಿ ‘ಬಹಿಸ್ಕಾರ ಬೇಡ, ಚುನಾವಣೆ ಮುಗಿದ ನಂತರ ಅಧಿಕೃತ ರಸ್ತೆ ನಿರ್ಮಾಣ ಮಾಡುವುದಾಗಿ ವಾಗ್ದಾನ ಮಾಡಿ ಹೋದವರು ಮತ್ತೆ ಇತ್ತ ಹೊರಳಿಲ್ಲ’ ಎಂದು ಮನವಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ 104 ವರ್ಷದ ಮೂಲ ಸ್ಮಶಾನವನ್ನು ಹೊರತುಪಡಿಸಿ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ರಿ.ಸ.ನಂ. 150ರಲ್ಲಿ ಕೆರೆಯನ್ನು ಸ್ಮಶಾನಕ್ಕೆ ಮಂಜೂರ ಮಾಡಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿರುವ ಗ್ರಮಸ್ಥರು, ಯಾವುದೇ ಕಾರಣಕ್ಕೂ ಅಧಿಕೃತ ಸ್ಮಶಾನಕ್ಕೆ ಸಾಗುವ ದಾರಿ ನಿರ್ಮಾಣವಾಗುವವರೆಗೂ ತಾವು ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲವೆಂದು ಮನವಿಯಲ್ಲಿ ಹೇಳಿದ್ದಾರೆ. ರಿ.ಸ.ನಂ.109ರಲ್ಲಿ 24 ಗುಂಟೆಗೆ ರಸ್ತೆ, ಕಾಂಪೌಂಡ್, ಚಿತಾಗಾರ ಹಾಗೂ ಬೋರವೆಲ್ ಸೇರಿದಂತೆ ಮತ್ತಿತರ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿರುವ ಗ್ರಾಮಸ್ಥರು, ನಿಗಧಿತ ಅವಧಿಯಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಜ.31ರಂದು ಬೆಳಗ್ಗೆ 11 ಗಂಟೆಯಿಂದ ಮಿನಿ ವಿಧಾನಸೌಧದ ಕಚೇರಿ ಎದುರು ಬೇಡಿಕೆ ಈಡೇರುವವರೆಗೂ ನಿರಂತರ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಗುತ್ತದೆಯೆಂದು ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಮಾಲತೇಶ ವಡ್ಡರ, ರವಿ ಕೆರೂಡಿ, ನಾಗರಾಜ ಓಲೇಕಾರ, ಶಿವಕುಮಾರ ಅಂಗಡಿ, ಹನುಮಂತ ಕುಂಚೂರ, ಕೃಷ್ಣ, ಅರುಣ ಕಂಡೆಕ್ಟರ, ಯಲ್ಲಪ್ಪ ಸವಣೂರ, ಅರುಣ ಅನುರಾಧ ಗಂಗಾಪುರ ಸೇರಿದಂತೆ ಗ್ರಾಮದ ಮತ್ತಿತರ ಗಣ್ಯ, ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.