ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಅಕ್ಟೊಬರ 2ರವರೆಗೆ ವಿವಿಧ ಸೇವಾ ರಚನಾತ್ಮಕ ಕಾರ್ಯಕ್ರಮ: ದೇಶಪಾಂಡೆ
ಲೋಕದರ್ಶನ ವರದಿ
ಅಥಣಿ 17: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಇಡೀ ದೇಶದಲ್ಲಿ ಸೆ.17 ರಿಂದ ಅಕ್ಟೋಬರ್ 2 ಗಾಂಧಿ ಜಯಂತಿ ವರೆಗೆ “ಸೇವಾ ಪಾಕ್ಷಿಕ” ಅಂಗವಾಗಿ ಅನೇಕ ವಿಧಾಯಕ, ಸೇವಾ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ದೇಶಪಾಂಡೆ ಹೇಳಿದರು.
ಅವರು ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಮಹಿಳಾ ಮೋರ್ಚಾ ಘಟಕದಿಂದ ಅಂಗನವಾಡಿ ದತ್ತು ಪಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ವಿಶ್ವ ಕಂಡ ಅತ್ಯಂತ ಶ್ರೇಷ್ಠ ಹಾಗೂ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸಮಗ್ರ ಅಭಿವೃದ್ಧಿಗೆ ಹಾಗೂ ಸರ್ವ ಜನಾಂಗದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಹೀಗಾಗಿಯೇ ಮೋದಿಯವರ ಆಗಾಗ ಉಲ್ಲೇಖಿಸುವಂತೆ ‘ಸಬ್ ಕಾ ಸಾಥ ಸಬ್ ಕಾ ವಿಕಾಸ’ ತಮ್ಮ ಹೇಳಿಕೆಯನ್ನು ವಾಸ್ತವಗೊಳಿಸಿದ್ದಾರೆ ಎಂದ ಅವರು ತಮ್ಮ ಇಡೀ ಜೀವನವನ್ನು ದೇಶದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ ಎನ್ನುವುದು ಒಂದೆಡೆಯಾದರೆ ಮತ್ತೊಂದೆಡೆ ಅವರು ವಿಶ್ವದ ಅನೇಕ ದೇಶಗಳ ಅನೇಕ ಜ್ವಲಂತ ಸಮಸ್ಯೆಗಳನ್ನು ಕೂಡ ಬಗೆ ಹರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಮೋದಿ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ಮಹಿಳಾ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ತೊದಲಬಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಹಿಳಾ ಮೋರ್ಚಾದಿಂದ ಅನೇಕ ಸೇವಾ ಹಾಗೂ ವಿಧಾಯಕ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಪ್ರತಿ ಮಂಡಲದಿಂದ ಒಂದು ಅಂಗನವಾಡಿ ಕೇಂದ್ರವನ್ನು ದತ್ತು ಪಡೆದು ಅಲ್ಲಿ ಎಲ್ಲ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಸಂಪೂರ್ಣ ಅಭಿವೃದ್ಧಿ ಪಡೆಸಲಾಗುವುದು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ ಕಾಂಬಳೆ, ಅಂಗನವಾಡಿ ಕೇಂದ್ರಗಳ ಮೂಲಕ ಇಡೀ ದೇಶದಲ್ಲಿ ಚಿಕ್ಕ ಮಕ್ಕಳ ಹಾಗೂ ಗರ್ಭಿಣಿ ಮಹಿಳೆಯರನ್ನು ಆರೋಗ್ಯವಾಗಿಡುವ ಅನೇಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. 1975 ರಲ್ಲಿ ಮೊಟ್ಟ ಮೊದಲ ಬಾರಿಗೆ ಅಂಗನವಾಡಿ ಯೋಜನೆಯನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸಿತು ಅಂದಿನಿಂದ ಇಲ್ಲಿಯವರೆಗೂ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಗೆ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣವನ್ನೂ ಸಹ ನೀಡಲಾಗುತ್ತಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಪ್ರತಿ ಮಂಡಲದಲ್ಲಿ ಒಂದೊಂದು ಅಂಗನವಾಡಿ ಕೇಂದ್ರವನ್ನು ದತ್ತು ಪಡೆದು ಅಭಿವೃದ್ಧಿ ಪಡೆಸುವ ಸೇವಾ ಕಾರ್ಯ ಅಭಿನಂದನಾರ್ಹ ಎಂದರು.
ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ ಮಾತನಾಡಿ, ನಾವೆಲ್ಲ ಕಾರ್ಯಕರ್ತರು, ಮುಖಂಡರು, ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು ಒಗ್ಗೂಡಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಆಯೋಜಿಸಿರುವ ಸೇವಾ ಪಾಕ್ಷಿಕ ಕಾರ್ಯಕ್ರವನ್ನು ಯಶಸ್ವಿಗೊಳಿಸೊಣ ಎಂದರು.
ಚಿಕ್ಕೋಡಿ ಜಿಲ್ಲಾ ಮಾಧ್ಯಮ ಸಂಚಾಲಕಿ ಮೃಣಾಲಿನಿ ದೇಶಪಾಂಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ದತ್ತು ಪಡೆದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಅಂಗನವಾಡಿ ಕೇಂದ್ರದ ಮಕ್ಕಳ ಮೂಲಕ ಸಸಿ ನೆಟ್ಟರು. ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಸವೀತಾ ಕಾಂಬಳೆ, ವಂದನಾ ಗೊಟಖಿಂಡಿ, ಜಯಶ್ರೀ ಕದಂ, ವನಿತಾ ಕೊಕಾಟೆ, ಚಂದಾ ಲೋನಾರೆ, ಯಲ್ಲವ್ವಾ ಕದಂ, ವಾಣಿಶ್ರೀ ವಾಘಮೋರೆ, ಪುರಸಭಾ ಸದಸ್ಯ ಕಲೇಶ ಮಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಖಾ ರುದ್ರಗೌಡರ ನಿರೂಪಿಸಿ ವಂದಿಸಿದರು.