ಸೌಂದತ್ತಿ

21ರಂದು ಉಗರಗೊಳದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಜಾತ್ರೆ

21ರಂದು ಉಗರಗೊಳದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಜಾತ್ರೆ

ಉಗರಗೋಳ(ಸವದತ್ತಿ ತಾಲೂಕು): ಶಿವಯೋಗದಲ್ಲಿ ಉತ್ತುಂಗ ಸಾಧನೆಗೈದ ಸವದತ್ತಿ ತಾಲೂಕು ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ತೀಕ ಮಾಸದ ಕೊನೆಯ ಸೋಮವಾರ (ನವ್ಹೆಂಬರ್‌-21 ರಂದು) ಜರುಗಲಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಪ್ರಾತಃಕಾಲದಲ್ಲಿ ಶ್ರೀಗುರು ಶಿವಪ್ಪಯ್ಯ ಶಿವಯೋಗಳವರ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗುವವು. ನಂತರ ಮುಂಜಾನೆ 9 ಗಂಟೆಗೆ ಶ್ರೀಮಠದಿಂದ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವವು 108 ಪೂರ್ಣ ಕುಂಭಗಳು ಸೇರಿದಂತೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಉಗರಗೋಳ ಗ್ರಾಮದಲ್ಲಿ ನಡೆಯಲಿದ್ದು, ನಂತರ ಮಹಾಪ್ರಸಾದದ ದಾಸೋಹ ಜರುಗಲಿದೆ. ಲಕ್ಷ ದೀಪೋತ್ಸವ :ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ 5-30 ಗಂಟೆಗೆ ನಡೆಯುವ ಲಕ್ಷ ದೀಪೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭಲ್ಲಿ ಹೂಲಿ ಸಾಂಬಯ್ಯನವರಮಠದಶ್ರೀಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳ ನಿರ್ವಾಣೇಶ್ವರಮಠದ ಶ್ರೀಮಹಾಂತ ಸ್ವಾಮೀಜಿ ಮತ್ತು ರಾಮಾರೂಢಮಠದ ಶ್ರೀಬ್ರಹ್ಮಾರೂಢ ಸ್ವಾಮೀಜಿ, ತಾರಿಹಾಳ ಅಡವಿಸಿದ್ಧೇಶ್ವರ ವಿರಕ್ತಮಠದ ಶ್ರೀಅಡವಯ್ಯ ದೇವರು ಸಾನ್ನಿಧ್ಯವಹಿಸುವರು.  

ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಸಯ್ಯ ಹಿರೇಮಠ ಲಕ್ಷ ದೀಪೋತ್ಸವ ಉದ್ಘಾಟಿಸಲಿದ್ದು, ನಿವೃತ್ತ ಎ.ಸಿ.ಪಿ. ಜಿ.ಆರ್‌. ಹಿರೇಮಠ ಅಧ್ಯಕ್ಷತೆವಹಿಸುವರು. ಉಗರಗೋಳ ಗ್ರಾ.ಪಂ. ಅಧ್ಯಕ್ಷೆ ಜುಬೇದಾ ಬಾರಿಗಿಡ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಪಿ. ಜೀರಗಾಳ, ಸವದತ್ತಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ, ಸವದತ್ತಿ ಹೆಸ್ಕಾಂ ಕಾರ್ಯನಿರ್ವಾಹಕ ಎಂಜನೀಯರ್ ಸುರೇಶ ಮುರಗೋಡ, ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೆ. ಎಸ್‌. ಗಂದಿಗವಾಡ, ವೈ.ವೈ. ಕಾಳಪ್ಪನವರ, ವಿವಿಧ ಕ್ಷೇತ್ರಗಳ ಗಣ್ಯರಾದ ಬಿ.ಪಿ. ಪಾಟೀಲ, ವೈ.ಆರ್‌. ಚನ್ನಪ್ಪಗೌಡರ, ಕುಮಾರಿ ಆರ್‌.ಪಿ.ಪವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಸವದತ್ತಿ, ಹುಕ್ಕೇರಿ, ಉಗರಗೋಳ, ಹರ್ಲಾಪೂರ, ಹಂಚಿನಾಳ, ಮುನವಳ್ಳಿ ಗ್ರಾಮಗಳ ವಿವಿಧ ಕ್ಷೇತ್ರಗಳ ಗಣ್ಯರು, ರೈತ ನಾಯಕರು, ಯುವ ಧುರೀಣರು ಅತಿಥಿಗಳಾಗಿ ಪಾಲ್ಗೊಳ್ಳುವರು.ಗುರುರಕ್ಷೆ ಗೌರವ :ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ನವೀನ ಪವಾಡಿ, ಭಾರತೀಯ ಸೈನ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಮಂಜುನಾಥ ಭೋವಿ, ಕ.ಸಾ.ಪ. ಗಜಲ್ ಕಾವ್ಯ ಪ್ರಶಸ್ತಿ ಪಡೆದಿರುವ ನರಗುಂದ ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆನಂದ ಭೋವಿ, 2021-22 ರಲ್ಲಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕಗಳನ್ನು ಸಂಪಾದಿಸಿದ ಯಲ್ಲಪ್ಪ ಉಳ್ಳಿಗೇರಿ, ರೇಖಾ ಹೋಳಿ, ಶರತ್ ಬಾರ್ಕಿ, ತಂಗೆವ್ವ ಗೊರವನಕೊಳ್ಳ, ವಿನಾಯಕ ಗುಡೆಣ್ಣವರ, ಶ್ರೇಯಸ್ ಬಾರ್ಕಿ ಅವರಿಗೆ ಗುರುರಕ್ಷೆಯ ಗೌರವ ನೀಡಿ ಸನ್ಮಾನಿಸಲಾಗುವುದು. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಂಗೀತ ಅಧ್ಯಾಪಕ ಡಾ.ಅರ್ಜುನ ವಠಾರ ಮತ್ತು ಡಾ.ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಕಲಾ ಬಳಗದಿಂದ ವಿವಿಧ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಈ ಪವಿತ್ರ ಸಮಾರಂಭದಲ್ಲಿ ಶ್ರೀಮಠದ ಸಮಸ್ತ ಸದ್ಭಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಕೃಪಾಕಾರುಣ್ಯಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಆಡಳಿತ ಮಂಡಳಿಯ ಸಿ.ಇ.ಓ. ನಿವೃತ್ತ ಕೆ.ಎ.ಎಸ್‌. ಅಧಿಕಾರಿ ಮಹೇಶ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ. 


ಸುದ್ದಿ ಓದಿ