ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ವಶಕ್ಕೆ ಪಡೆದ ಅಧಿಕಾರಿಗಳು
ಲೋಕದರ್ಶನ ವರದಿ
ರಾಣಿಬೆನ್ನೂರ 10: ತಾಲೂಕಿನ ತುಂಗಭದ್ರಾ ನದಿ ತೀರದ ಪ್ರದೇಶಗಳಾದ ಚಂದಾಪುರ, ಹರನಗಿರಿ, ಕೋಣತಂಬಿಗಿ, ಫತ್ತೇಪುರ, ಮಾಕನೂರು, ಕುದರಿಹಾಳ, ಉದಗಟ್ಟಿ, ಬೇಲೂರು, ಕೋಟಿಹಾಳ ಹಾಗೂ ಚಿಕ್ಕಕುರವತ್ತಿ ಗ್ರಾಮಗಳಿಗೆ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅನೀರೀಕ್ಷಿತ ಬೇಟಿ ನೀಡಿ ಅಕ್ರಮ ಮರಳು ದಾಸ್ತಾನುಗಳ ಮೇಲೆ ದಾಳಿ ನಡೆಸಿ 1.43 ರೂ. ಬೆಲೆ ಬಾಳುವ ಒಟ್ಟು 205 ಮೆಟ್ರಿಕ್ ಮರಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಕುದರಿಹಾಳ 60 ಮೆಟ್ರಿಕ್ಟನ್, ಉದಗಟ್ಟು 40 ಮೆಟ್ರಿಕ್ಟನ್, ಬೇಲೂರು 10 ಮಟ್ರಿಕ್ ಟನ್, ಚಿಕ್ಕಕುರವತ್ತಿ 5, ಕೋಟಿಹಾಳ 90 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದ್ದಾರೆ. ದಾಳಿ ಕಾಲಕ್ಕೆ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಮರಳು ಸಂಗ್ರಹಕ್ಕೆ ಬಳಸುತ್ತಿದ್ದ ತೆಪ್ಪಗಳನ್ನು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ, ಡಿವೈಎಸ್ಪಿ ಟಿ.ವಿ.ಸುರೇಶ್, ಡಿಸಿಆರ್ಬಿ ಡಿಎಸ್ಪಿ ಎಂ.ಎಸ್.ಪಾಟೀಲ ಹಾಗೂ ಕುಮಾರಪಟ್ಟಣ ಸಿಪಿಐ ಭಾಗ್ಯವತಿ ಭಂತಿ, ಗ್ರಾಮೀಣ ಸಿಪಿಐ ಶೈಲ ಚೌಗಲಾ, ನಗರ ಠಾಣೆ ಸಿಪಿಐ ಎಂ.ವೈ ಗೌಡಪ್ಪಗೌಡ ಹಾಗೂ ಪಿಎಸ್ಐಗಳಾದ ಮೇಘರಾಜ, ಪ್ರಕಾಶ ಶಿಡ್ಲಣ್ಣನವರ, ಆರ್.ಜೆ. ಹಿರೇಮಠ, ತೇಗೂರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಾಗರಾಜ ಮತ್ತು ಕೋದಂಡರಾಮ ಅವರ ಜಂಟಿ ಕಾರ್ಯಾಚರಣೆ ನಡೆಸಿದ್ದರು.