ಕೊವಿಡ್ : ಭಾರತದಲ್ಲಿ 50 ಲಕ್ಷ ದಾಟಿದ ಪ್ರಕರಣಗಳ ಸಂಖ್ಯೆ
ನವದೆಹಲಿ, ಸೆಪ್ಟೆಂಬರ್ 16: ಕಳೆದ 24 ಗಂಟೆಗಳಲ್ಲಿ 90 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುವುದರೊಂದಿಗೆ ಭಾರತದಲ್ಲಿ ಕೊವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 50 ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿ ತಿಳಿಸಿದೆ.
ಕಳೆದ ಒಂದು ದಿನದಲ್ಲಿ ದೇಶದಲ್ಲಿ 90,123 ಹೊಸ ಪ್ರಕರಣಗಳು ಮತ್ತು 1,290 ಸಾವುಗಳು ವರದಿಯಾಗಿವೆ. ಹೊಸ ಪ್ರಕರಣಗಳು ಸೇರಿ ಸದ್ಯ ಒಟ್ಟು ಪ್ರಕರಣಗಳ ಸಂಖ್ಯೆ 50,20,360 ರಷ್ಟಿದ್ದರೆ, ಸಾವಿನ ಸಂಖ್ಯೆ 82,066 ಕ್ಕೆ ಏರಿದೆ. ಸಾವಿನ ಪ್ರಮಾಣ ಸದ್ಯ, ಶೇ 1.63 ರಷ್ಟಿದೆ.
ಚೇತರಿಕೆಗೆ ಸಂಬಂಧಿಸಿದಂತೆ ಕಳೆದೊಂದು ದಿನದಲ್ಲಿ 82,961 ಸೋಂಕಿತರು ಗುಣಮುಖರಾಗುವುದರೊಂದಿಗೆ ಚೇತರಿಕೆ ಕಂಡ ಪ್ರಕರಣಗಳ ಒಟ್ಟು ಸಂಖ್ಯೆ 39,42,360 ಕ್ಕೆ ಮತ್ತು ಚೇತರಿಕೆ ಪ್ರಮಾಣ ಶೇ 78.53 ಕ್ಕೆ ಏರಿದೆ.
ಸದ್ಯ, ದೇಶದಲ್ಲಿ 99,59,33 ಸಕ್ರಿಯ ಪ್ರಕರಣಗಳಿವೆ. ಇವು ಇದುವರೆಗೆ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಶೇ 19.84ರಷ್ಟಿವೆ.
ಮಹಾರಾಷ್ಟ್ರ ಅತಿ ಹೆಚ್ಚು ಬಾಧಿತ ರಾಜ್ಯವಾಗಿ ಮುಂದುವರೆದಿದ್ದು, ನಂತರ ಸ್ಥಾನಗಳಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ 11,16,842 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗಿನಿಂದ ಮಂಗಳವಾರದವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 5,94,29,115 ಕ್ಕೆ ಏರಿದೆ.
ಜಾಗತಿಕವಾಗಿ ಅಮೆರಿಕ ಹೆಚ್ಚು ಸೋಂಕಿ ಬಾಧಿತ ರಾಷ್ಟ್ರವಾಗಿ ಉಳಿದಿದ್ದು, ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಬ್ರೆಜಿಲ್ ಇವೆ.