ರಾಷ್ಟ್ರೀಯ

ಈಗ ಸರ್ಕಾರವೇ ಬಡವರ ಬಳಿ ತೆರಳುತ್ತಿದೆ: ಪ್ರಧಾನಿ ಮೋದಿ

ಈಗ ಸರ್ಕಾರವೇ  ಬಡವರ ಬಳಿ ತೆರಳುತ್ತಿದೆ: ಪ್ರಧಾನಿ ಮೋದಿ

ನವದೆಹಲಿ, ಸೆಪ್ಟೆಂಬರ್ 12: ಗ್ರಾಮೀಣ  ಪ್ರದೇಶಗಳ  ಬಡವರಿಗಾಗಿ  ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ  ವಸತಿ   ಯೋಜನೆಗಳು  ಪಾರದರ್ಶಕತೆಯತ್ತ  ಇರಿಸಿರುವ  ದೊಡ್ಡ ಹೆಜ್ಜೆಯಾಗಿದ್ದು, ಈಗ ಸರ್ಕಾರವೇ  ಬಡವರ ಬಳಿ ತೆರಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಶನಿವಾರ  ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ, ಪ್ರಧಾನ ಮಂತ್ರಿ  ಗ್ರಾಮೀಣ ಆವಾಸ್ ಯೋಜನೆಯಡಿ ನಿರ್ಮಿಸಲಾದ 1.75 ಲಕ್ಷ ಮನೆಗಳ  ಗೃಹ ಪ್ರವೇಶ  ಕಾರ್ಯಕ್ರಮವನ್ನು  ವಿಡಿಯೋ ಕಾನ್ಫರೆನ್ಸಿಂಗ್  ಮೂಲಕ  ನೆರವೇರಿಸಿ ಮಾತನಾಡಿದ  ಅವರು,   2014ಕ್ಕೂ  ಮೊದಲಿನ   ಅನುಭವಗಳ  ಮಾಹಿತಿ ಪಡೆದುಕೊಂಡಿದ್ದೇನೆ.  ಹಳೆಯ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿದ್ದು. ಪಿಎಂ ಆವಾಸ್  ಯೋಜನೆ  ಸಂಪೂರ್ಣ ಹೊಸ ಆಲೋಚನೆಯೊಂದಿಗೆ  ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು. ಗೃಹ ಪ್ರವೇಶಕ್ಕೆ  ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ ಎಂದು  ಪ್ರಧಾನಿ ತಿಳಿಸಿದರು.

ಈ ಹಿಂದೆ ಬಡವರು ಸರ್ಕಾರಿ   ಕಛೇರಿಗಳಿಗೆ  ಅಲೆಯಬೇಕಾಗಿತ್ತು. ಈಗ  ನಮ್ಮ ಸರ್ಕಾರ ಜನರ ಬಳಿಗೆ ತೆರಳುತ್ತಿದೆ ಎಂದು ನುಡಿದರು.  ಪ್ರಭಾವ, ವಶೀಲಿಬಾಜಿಗೆ ಮಣಿದು   ಫಲಾನುಭವಿ ಪಟ್ಟಿಯಿಂದ   ಆರ್ಹ ಹೆಸರು ತೆಗೆದು, ಅನರ್ಹರನ್ನು ಸೇರಿಸಲು ಅವಕಾಶವಿಲ್ಲ.  ಫಲಾನುಭವಿಗಳ ಆಯ್ಕೆಯಿಂದ  ಮನೆ ನಿರ್ಮಾಣದ ವರೆಗೆ ವೈಜ್ಞಾನಿಕ ಹಾಗೂ ಪಾರದರ್ಶಕ ವಿಧಾನ ಆಳವಡಿಸಿಕೊಳ್ಳಲಾಗಿದೆ ಎಂದು  ಪ್ರಧಾನಿ ಹೇಳಿದರು. 

ಸ್ಥಳೀಯ ಅಗತ್ಯಗಳ ಪರಿಗಣನೆಗೆ  ತೆಗೆದುಕೊಂಡು ಪ್ರಸ್ತುತ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ವಸ್ತುಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.  ಪಿಎಂ ಆವಾಸ್ ಯೋಜನೆಯಾಗಲಿ,  ಸ್ವಚ್ಛ ಭಾರತ್ ಅಭಿಯಾನ ಯೋಜನೆಯ ಶೌಚಾಲಯಗಳ ನಿರ್ಮಾಣವಾಗಲಿ  ಬಡವರಿಗೆ ಪ್ರಯೋಜನದ  ಜತೆಗೆ  ಉದ್ಯೋಗ  ಹಾಗೂ ಸಬಲೀಕರಣ  ನಮ್ಮ ಆದ್ಯತೆಯಾಗಿದೆ ಎಂದು ನುಡಿದರು. ಈ ಯೋಜನೆಗಳು   ಗ್ರಾಮೀಣ ಪ್ರದೇಶ ಜನರ  ಬದುಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೋದಿ ಕೆಲ  ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಸಮಾರಂಭದಲ್ಲಿ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ , ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ  ಸಿಂದಿಯಾ ಭಾಗವಹಿಸಿದ್ದರು.

ಸುದ್ದಿ ಓದಿ