ಅಗ್ರಣಿ ನದಿಯಲ್ಲಿ ನೀರಿಲ್ಲ: ಸಂಕಷ್ಟದಲ್ಲಿ ರೈತರು : ಬರ ಘೋಷಣೆ ಮಾಡಿ ರೈತರ ಸಾಲ ಮನ್ನಾ ಮಾಡಲು ಆಗ್ರಹ
ಸಂಬರಗಿ, ಆ.11: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಅಗ್ರಣಿ ನದಿಯಲ್ಲಿ ನೀರಿನ ಕೊರತೆ ತೀವ್ರಗೊಂಡಿದ್ದು, ನದಿ ಪಾತ್ರ ಬಹುತೇಕ ಒಣಗಿದೆ. ಸರ್ಕಾರ ಇನ್ನೂ ಬರಗಾಲ ಘೋಷಣೆ ಮಾಡದಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
ಗಡಿ ಭಾಗದ ಹಲವು ಗ್ರಾಮಗಳು ಮಳೆಯನ್ನೇ ಅವಲಂಬಿಸಿ ಕೃಷಿ ನಡೆಸುತ್ತಿದ್ದು, ಸಮರ್ಕ ಮಳೆಯಿಲ್ಲದೆ ಬೆಳೆಗಳು ಹಾನಿಗೊಳಗಾಗುವ ಭೀತಿ ಎದುರಾಗಿದೆ. ಪ್ರತಿ ವರ್ಷ ಎರಡು-ಮೂರು ತಿಂಗಳು ಅಗ್ರಣಿ ನದಿ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿತ್ತಾದರೂ, ಈ ವರ್ಷ ಮಳೆ ಕೊರತೆಯಿಂದ ನದಿಯಲ್ಲಿ ನೀರೇ ಕಾಣದಂತಾಗಿದೆ.
ಬಸವೇಶ್ವರ ಏತ ನೀರಾವರಿ ಯೋಜನೆಯಡಿ ಸಮೀಪದ ಕಾಲುವೆಯಿಂದ ಅಗ್ರಣಿ ನದಿಗೆ ನೀರು ಹರಿಸುವ ಪ್ರಯತ್ನ ನಡೆದಿದ್ದರೂ, ನೀರಿನ ಮಟ್ಟ ಕಡಿಮೆಯಿರುವುದರಿಂದ ನೀರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕಾಲುವೆಗಳ ಮೂಲಕ ನೀರು ಬಿಡಲು ಮುಂದಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಂತಾಗಿದೆ.
ಇಂಗಳಗಾವ್ ಸೇರಿದಂತೆ ಅಗ್ರಣಿ ನದಿ ತೀರದ ಪ್ರದೇಶಗಳಲ್ಲಿ ನದಿ ಸಂಪೂರ್ಣ ಒಣಗಿದ್ದು, ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಕಳೆದ ಹಲವು ವರ್ಷಗಳಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಾಗ ಹಿನ್ನೀರಿನ ಮೂಲಕ ಅಗ್ರಣಿ ನದಿಗೆ ನೀರು ಹರಿಯುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಆ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ರೈತ ಸಂಘಟನೆಯ ನಾಯಕಿ ಕಿರಣ್ ಮಿಸಾಳ್, “ನಮ್ಮ ಸ್ವಂತ ಖರ್ಚಿನಲ್ಲಿ ಕಾಲುವೆ ನೀರನ್ನು ನದಿಗೆ ಹರಿಸಿದ್ದೇವೆ. ಆದರೆ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನೀರು ಅಣೆಕಟ್ಟಿನ ಆಚೆಗೆ ಸಾಗುತ್ತಿಲ್ಲ. ಮಳೆ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಬರಗಾಲ ಘೋಷಿಸಿ ರೈತರ ಸಾಲ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.