ಬೆಳಗಾವಿ

ಎಚ್‌ಐವಿ ಸೋಂಕಿನ ಬಗ್ಗೆ ಭಯ ಬೇಡ, ಜಾಗೃತಿ ಅಗತ್ಯ: ಮಹೇಶ್ ಪಾಟೀಲ

ಎಚ್‌ಐವಿ ಸೋಂಕಿನ ಬಗ್ಗೆ ಭಯ ಬೇಡ, ಜಾಗೃತಿ ಅಗತ್ಯ: ಮಹೇಶ್ ಪಾಟೀಲ

ಹಿಡಕಲ್ ಗ್ರಾಮದಲ್ಲಿ ಸಮಗ್ರ ಉಚಿತ ಆರೋಗ್ಯ ತಪಾಸಣಾ ಶಿಬಿರ  

ಪಾಲಬಾವಿ 3: ಎಚ್‌ಐವಿ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಭಯವಿದ್ದು, ಭಯಪಡುವ ಅಗತ್ಯವಿಲ್ಲ. ಆದರೆ ಸೋಂಕಿನ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಐಸಿಟಿಸಿ ಆಪ್ತ ಸಮಾಲೋಚಕ ಮಹೇಶ್ ಪಾಟೀಲ ಹೇಳಿದರು. ಸಮೀಪದ ಹಿಡಕಲ್ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಗ್ರಾಮ ಪಂಚಾಯಿತಿ ಹಿಡಕಲ್, ರಾಜ್ಯ ಏಡ್ಸ್‌ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯಿತಿ ಬೆಳಗಾವಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಬೆಳಗಾವಿ, ತಾಲೂಕು ಆರೋಗ್ಯ ಇಲಾಖೆ ರಾಯಬಾಗ, ಸಮುದಾಯ ಆರೋಗ್ಯ ಕೇಂದ್ರ ಮುಗಳಖೋಡ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿಡಕಲ್ ಹಾಗೂ ಶಕ್ತಿ ಮಹಿಳಾ ಸಂಘ ಗೋಕಾಕ, ಎಲ್ಡಬ್ಲ್ಯೂಎಸ್ ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಮಗ್ರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.  

ಎಚ್‌ಐವಿ ಹರಡುವ ಮಾರ್ಗಗಳ ಬಗ್ಗೆ ಮಾಹಿತಿ  

ಎಚ್‌ಐವಿ ಸೋಂಕು ಮುಖ್ಯವಾಗಿ ನಾಲ್ಕು ವಿಧಗಳಲ್ಲಿ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಪಡೆಯುವುದರಿಂದ, ಸಂಸ್ಕರಿಸದ ಸೂಜಿ-ಸಿರಿಂಜ್ ಬಳಕೆಯಿಂದ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆ ಇದೆ ಎಂದು ಮಹೇಶ್ ಪಾಟೀಲ ವಿವರಿಸಿದರು.  

ಸೋಂಕಿತ ವ್ಯಕ್ತಿಯೊಂದಿಗೆ ಕೆಲಸ ಮಾಡುವುದರಿಂದ, ಊಟ ಮಾಡುವುದರಿಂದ, ಕೈಕುಲುಕುವುದರಿಂದ ಅಥವಾ ಸೊಳ್ಳೆ ಕಚ್ಚುವುದರಿಂದ ಎಚ್‌ಐವಿ ಸೋಂಕು ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ತಪ್ಪು ಕಲ್ಪನೆಗಳನ್ನು ಬಿಟ್ಟು ಜಾಗೃತರಾಗಬೇಕು ಎಂದು ಹೇಳಿದರು.  

ಆರೋಗ್ಯ ತಪಾಸಣೆಗೆ ಕರೆ  

ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಬಿಪಿ, ಶುಗರ್, ಸಿಫಿಲಿಸ್ ಹಾಗೂ ಎಚ್‌ಐವಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ದೇಹದಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.  

58ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ  

ಶಿಬಿರದಲ್ಲಿ ಸುಮಾರು 58ಕ್ಕೂ ಹೆಚ್ಚು ಜನರು ಬಿಪಿ, ಶುಗರ್ ಹಾಗೂ ಎಚ್‌ಐವಿ ಪರೀಕ್ಷೆ ಮಾಡಿಸಿಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು.  

ಕಾರ್ಯಕ್ರಮದಲ್ಲಿ ದಂತ ವೈದ್ಯೆ ಡಾ. ಧನಶ್ರೀ ಜಾಧವ, ಗ್ರಾಮ ಪಂಚಾಯಿತಿ ಸಿಬ್ಬಂದಿ ಆನಂದ ಹಿರೇಮಠ, ರವೀಂದ್ರ ಇಂಗಳಿ, ಆಸ್ಪತ್ರೆ ಸಿಬ್ಬಂದಿಗಳಾದ ಭಾರತಿ ಹೊಟ್ಟಿ, ಪ್ರತಿಭಾ ಮೂಡಲಗಿ, ಕಸ್ತೂರಿ ದೇವರಮನಿ, ಇರ್ಷಾದ್ ಪೀರಜಾದೆ, ಈರ​‍್ಪ ಮಡಿವಾಳ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಶಕ್ತಿ ಮಹಿಳಾ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.  

ಆರೋಗ್ಯ ಜಾಗೃತಿಯೇ ಸೋಂಕು ತಡೆಗೆ ಪ್ರಮುಖ  

ಮಹೇಶ್ ಪಾಟೀಲ ಸ್ವಾಗತಿಸಿದರು. ಇರ್ಫಾನ್ ಪೀರಜಾದೆ ವಂದಿಸಿದರು. ಶಿಬಿರದ ಮೂಲಕ ಗ್ರಾಮಸ್ಥರಲ್ಲಿ ಎಚ್‌ಐವಿ ಹಾಗೂ ಇತರ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು. 


ಸುದ್ದಿ ಓದಿ