ಬಾರ್ಕ್ ನಿಂದ ನ್ಯೂಸ್ ಚಾನೆಲ್ ಗಳ ವಾರದ ರೇಟಿಂಗ್ ಸ್ಥಗಿತ
ನವದೆಹಲಿ, ಅ 15 :ನಕಲಿ ಟಿಆರ್ಪಿ ಹಗರಣ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರೇಟಿಂಗ್ ಏಜೆನ್ಸಿ ಬಾರ್ಕ್ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ವ್ಯವಸ್ಥೆಗಳ ಪರಿಶೀಲಿಸುವ ಉದ್ದೇಶದಿಂದ ಮೂರು ತಿಂಗಳುಗಳ ಕಾಲ ನ್ಯೂಸ್ ಚಾನೆಲ್ ಗಳ ವಾರದ ರೇಟಿಂಗ್ ಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ.
ಟಿಆರ್ ಪಿ ರೇಟಿಂಗ್ ಸ್ಥಗಿತವು ಎಲ್ಲ ಇಂಗ್ಲೀಷ್, ಹಿಂದಿ, ಪ್ರಾದೇಶಿಕ ಹಾಗೂ ಬ್ಯುಸಿನೆಸ್ ನ್ಯೂಸ್ ಚಾನೆಲ್ ಗಳಿಗೂ ಅನ್ವಯವಾಗಲಿದೆ. ರಿಪಬ್ಲಿಕ್ ಟಿವಿ ಸಹಿತ ಮೂರು ಚಾನೆಲ್ ಗಳ ವಿರುದ್ಧ ರೇಟಿಂಗ್ ತಿರುಚುವಿಕೆ ಆರೋಪದಲ್ಲಿ ಮುಂಬೈ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.ಟಿಆರ್ಪಿಯನ್ನು ತಿರುಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದಾಗಲೇ ಭಾರಿ ಸಂಕಷ್ಟದಲ್ಲಿ ಇರುವ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಅರ್ನಬ್ ವಿರುದ್ಧ ಕಾನೂನು ಸಮರ ಸಾರಿ, 200 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ.