ಹೊಸ ಕೃಷಿ ಕಾನೂನುಗಳು ರೈತರ ಆದಾಯ ವೃದ್ಧಿಸಲಿವೆ; ಕಿಶನ್ ರೆಡ್ಡಿ
ಹೈದರಾಬಾದ್, ಅಕ್ಟೋಬರ್ 5: ಹೊಸ ಕೃಷಿ ಕಾನೂನುಗಳು ದೇಶದ ರೈತರ ಆದಾಯ ಹೆಚ್ಚಿಸಲಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಹೇಳಿದ್ದಾರೆ.
ಸೋಮವಾರ ರಾಜ್ಯದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ವಿಪಕ್ಷಗಳು ಕೃಷಿ ಕಾನೂನಿನ ಬಗ್ಗೆ ತಪ್ಪು ವದಂತಿ ಹಬ್ಬಿಸುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ರದ್ದುಗೊಳಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಎಂಎಸ್‌ಪಿ ಪರಿಣಾಮಕಾರಿಯಾಗಿ ಜಾರಿಯಾಗಲಿದೆ. ರೈತರಿಗೆ ಉತ್ತಮ ಮಾರುಕಟ್ಟೆ ದರ ದೊರೆಯದಿದ್ದಲ್ಲಿ, ಕೇಂದ್ರ ಸರ್ಕಾರ ಎಂಎಸ್‌ಪಿ ಪಾವತಿಸಿ ಬೆಳೆಗಳನ್ನು ಖರೀದಿಸಲಿದೆ ಎಂದು ಭರವಸೆ ನೀಡಿದರು.
ರೈತರ ಆದಾಯ ದುಪ್ಪಟ್ಟಾಗಿಸುವ ಗುರಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ನೀತಿ ಜಾರಿಗೆ ತಂದಿದೆ. ಇದು ರೈತರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ.
ಮಸೂದೆ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಯಾವುದೇ ರೈತರು ಪಾಲ್ಗೊಂಡಿಲ್ಲ. ಇದು ಕೇವಲ ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಸೆಮಿನಾರ್ ಮತ್ತು ದುಂಡು ಮೇಜಿನ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಹೊಸ ಕೃಷಿ ಕಾನೂನುಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.