ಪಶು ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ; ಗ್ರಾಮಸ್ಥರ ಆಕ್ರೋಶ ಗ್ರಾಮಕ್ಕೆ ಧಾವಿಸಿದ ವೈದ್ಯಾಧಿಕಾರಿ
ಲೋಕದರ್ಶನ ವರದಿ
ರಾಣೀಬೆನ್ನೂರು 24: ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯ ವೈದ್ಯರು ಗ್ರಾಮದಲ್ಲಿ ವೈದ್ಯಕೀಯ ಸೇವೆ ಸರಿಯಾಗಿ ಮಾಡದೇ ನಿರ್ಲಕ್ಷ್ಯತನ ವಹಿಸುತ್ತಿರುವುದಾಗಿ ಆರೋಪಿಸಿದ ವಂದೇ ಮಾತರಂ ಯುವಕ ಸ್ವಯಂಸೇವಾ ಸಮಿತಿಯ ಮುಖಂಡರು ಕೂಡಲೇ ಈ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ವೈದ್ಯರ ನಿರ್ಲಕ್ಷ್ಯತನ ಖಂಡಿಸಿ ಮಾ 28 ರಂದು ನಗರದ ಪಶು ಸಂಗೋಪನಾ ಇಲಾಖೆ ವಿರುದ್ಧ ಅಂದು ಕಚೇರಿ ಮುಂಭಾಗ ಧರಣಿಯೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಇತ್ತೀಚೆಗೆ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಮನವಿಗೆ ಸ್ಪಂದಿಸಿದ ತಾಲೂಕ ಆಡಳಿತವು ಇಲಾಖೆಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದ್ದರು. ಅದಕ್ಕೆ ಸ್ಪಂದಿಸಿದ ಡಾಽಽ ಪರಮೇಶ ಹುಬ್ಬಳ್ಳಿ ಅವರು ಗ್ರಾಮಕ್ಕೆ ತೆರಳಿ ಶ್ರೀ ಮಾರುತಿ ದೇವಸ್ಥಾನದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮುಂದೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸೇವಾ ಕಾರ್ಯಗಳು ನಿಗದಿತ ಅವಧಿಯಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು. ಇಲಾಖೆಯಿಂದ ನೀಡುವ ಸೇವೆಗಾಗಿ ಯಾವುದೇ ಹಣವನ್ನು ಪಡೆಯುವ ಪ್ರಶ್ನೆ ಬರಲಾರದು ಆದರೂ ಸೇವೆಯಲ್ಲಿರುವ ಸಿಬ್ಬಂದಿ ಹಣವನ್ನು ಕೇಳಿದರೆ ತಮ್ಮ ಗಮನಕ್ಕೆ ತರಬೇಕು ಇದರಲ್ಲಿ ಯಾವುದೇ ಮುಲಾಜು ಬೇಡ ಎಂದು ಖಡಕ್ಕಾಗಿ ಉತ್ತರಿಸಿದರು. ಹಣ ಪಡೆದಿದ್ದು ಕಂಡು ಬಂದಲ್ಲಿ ತಕ್ಷಣವೇ ಅವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಿಗದಿಯಂತೆ ಇಲಾಖೆಯ ಸಿಬ್ಬಂದಿ ಪ್ರತಿ ವಾರದ ಬುಧವಾರ ಬೆಳಿಗ್ಗೆ 9-00ರಿಂದ 11-00ರವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಮತ್ತು ಸರ್ಕಾರದಿಂದ ಜಾನುವಾರುಗಳಿಗಾಗಿ ಬರುವ ಯಾವುದೇ ಯೋಜನೆಗಳನ್ನು ಮಾಹಿತಿ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದ ಡಾಽಽ ಹುಬ್ಬಳ್ಳಿಯವರು ಹಣ ವಸೂಲಿ ಮಾಡುವವರ ವಿರುದ್ದ ಈ ಕೂಡಲೇ ಮೇಲಾಧಿಕಾರಿಗಲ ಗಮನಕ್ಕೆ ತರಲಾಗುವುದು. ಇಲಾಖೆ ಇರುವುದೇ ಗ್ರಾಮೀಣ ಪ್ರದೇಶಗಳ ಕೃಷಿಕರ, ರೈತರ ಜಾನುವಾರುಗಳನ್ನು ಸಾಕುವವರ ಸೇವೆಗಾಗಿಯೇ ಇದೆ ಎನ್ನುವುದನ್ನು ನಾಗರೀಕರು ಅರ್ಥ ಮಾಡಿಕೊಳ್ಳಬೇಕು. ಸಭೆಯಲ್ಲಿ ಸಮಿತಿಯ ಅದ್ಯಕ್ಷ ಜಗದೀಶ ಕೆರೂಡಿ ರಾಜು ಓಲೇಕಾರ, ರವಿ ಮಳ್ಳಳ್ಳಿ, ರವಿ ಕೆರೂಡಿ, ಸಂತೋಷ ವಡ್ಡರ, ಹನುಮಂತ ಓಲೇಕಾರ, ಶಿವಪ್ಪ ಕೆರೂಡಿ, ಬಸವರಾಜಪ್ಪ ಬ್ಯಾಡಗಿ, ಕುಮಾರ ಅಂಗಡಿ, ಸುರೇಶ ಕೆರೂಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.