ನವಲಿಹಾಳ ಸರ್ಕಾರಿ ಪ್ರೌಢ ಶಾಲೆಯ ಅಡುಗೆ ಕೋಣೆ ಉದ್ಘಾಟನಾ ಸಮಾರಂಭ
ಚಿಕ್ಕೋಡಿ 03: ಚಿಕ್ಕೋಡಿ-ಸದಲಗಾ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮಾದರಿ ಕ್ಷೇತ್ರ ಮಾಡಲಾಗಿದೆ. ಮುಂಬರುವ ದಿನಗಲ್ಲಿ ಸರ್ಕಾರಿ ಇಂಜನೀಯರಿಂಗ್ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಗುರಿ ಇದೆ ಎಂದು ಶಾಸಕ ಗಣೇಶ ಹುಕೇರಿ ಹೇಳಿದರು.
ತಾಲೂಕಿನ ನವಲಿಹಾಳ ಸರ್ಕಾರಿ ಪ್ರೌಢ ಶಾಲೆಯ ಅಡುಗೆ ಕೋಣೆ ಉದ್ಘಾಟನೆ, ಎಂಟನೆ ತರಗತಿ ಮಕ್ಕಳ ಸ್ವಾಗತ, ಶಿಕ್ಷಕ ಎಸ್.ಬಿ.ಮಗದುಮ್ಮ ಸೇವಾ ನಿವೃತ್ತಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರಿಂದ ಮಕ್ಕಳು ಈ ದೇಶದ ಶಕ್ತಿಯಾಗಿ ಹೊರಹೊಮ್ಮುತ್ತಾರೆ, ದೇಶವನ್ನು ಮುನ್ನಡೆಸಿಕೊಂಡು ಹೋಗುವ ಪ್ರಜೆಗಳಾಗಿ ಹೊರಹೊಮ್ಮಲಿದ್ದು, ಆ ದಿಸೆಯಲ್ಲಿ ಮಕ್ಕಳಿಗೆ ಸಹಾಯ ಸಹಕಾರ ಮಾಡಲು ನಾನು ಸಿದ್ಧನಿದ್ದೇನೆ. ಚಿಕ್ಕೋಡಿ-ಸದಲಗಾ ಕ್ಷೇತ್ರದ ಯಾವುದೇ ಶಾಲೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ ಎಂಬುದು ಕಾಣಬಾರದು. ನವಲಿಹಾಳ ಶಾಲೆಗೆ ಶೀಘ್ರದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಮಾಡಲು ಈಗಾಗಲೇ ಚಿಕ್ಕೋಡಿ, ಸದಲಗಾ ಪಟ್ಟಣದಲ್ಲಿ ಎರಡು ಕೇಂದ್ರೀವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಜಿಟಿಟಿಸಿ ಕಾಲೇಜು, ಐಟಿಐ ಕಾಲೇಜು ಮತ್ತು ವಸತಿ ಶಾಲೆಗಳನ್ನು ಸ್ಥಾಪನೆ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ. ನವಲಿಹಾಳ ಗ್ರಾಮದಲ್ಲಿ ನೂರ ಎಕರೆ ಭೂಮಿ ಇದ್ದರೆ ಟೆಕ್ಸಟೈಲ್ ಪಾರ್ಕ ನಿರ್ಮಾಣ ಮಾಡಿ ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಡುವ ಸಂಕಲ್ಪ ಇದೆ ಎಂದರು.
ಅಜ್ಜಿ ಹೆಸರಿನಲ್ಲಿ ಪೌಂಡೇಶನ:
ಅನ್ನಪೂಣೇಶ್ವರಿ ಬಾಬಣ್ಣಾ ಹುಕ್ಕೇರಿ ತಾವು ಸಂಪಾದನೆ ಮಾಡಿದ ಹಣದಲ್ಲಿ ಬೆಳಗಾವಿಯಲ್ಲಿ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದರು. ಅವರ ಸವಿ ನೆನಪಿಗಾಗಿ ನಾನು ಮತ್ತು ನನ್ನ ತಂದೆ ಪ್ರಕಾಶ ಹುಕ್ಕೇರಿ ಅನ್ನಪೂರ್ಣೇಶ್ವರಿ ಪೌಂಡೇಶನ ಸ್ಥಾಪನೆ ಮಾಡಿ ಗಡಿ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರತಿ ವರ್ಷ 2 ಕೋಟಿ ರೂ ಹಣ ಖರ್ಚು ಮಾಡಲಾಗುತ್ತದೆಂದು ಶಾಸಕ ಗಣೇಶ ಹುಕ್ಕೇರಿ ತಮ್ಮ ಅಜ್ಜಿ ಕಾರ್ಯವನ್ನು ನೆನಪು ಮಾಡಿಕೊಂಡರು.
ನಿವೃತ್ತ ಉಪನ್ಯಾಸಕ ವಿಜಯ ಧಾರವಾಡಕರ ಮಾತನಾಡಿ ಮಕ್ಕಳು ಪುಸ್ತಕ ಓದುವವದರ ಜೊತೆಗೆ ಪ್ರಶ್ನೆ ಹುಟ್ಟು ಹಾಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಕರು ಹೇಳಿದ ಪಾಠ ಬೋಧನೆ ಮನದಟ್ಟಾಗಿ ಕೇಳಬೇಕು. ಶಿಕ್ಷಕರು ಕೂಡಾ ಮಕ್ಕಳ ಮನಸ್ಥಿತಿ ಅರಿತುಕೊಂಡು ಪಾಠ ಮಾಡಬೇಕು ಎಂದರು.
ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮಾಜ ಶಿಕ್ಷಕರಾಗಿ ಸಏವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದ ಎಸ್.ಬಿ.ಮಗದುಮ್ಮ ದಂಪತಿಗಳನ್ನು ಶಾಸಕ ಗಣೇಶ ಹುಕ್ಕೇರಿ ಸನ್ಮಾನಿಸಿ ಗೌರವಿಸಿದರು.
ವೇದಿಕೆ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚೀನ ಹುಕ್ಕೇರಿ, ಉಪಾಧ್ಯಕ್ಷ ಕವಿತಾ ಮೋಟನ್ನವರ, ಹಿರಿಯರಾದ ಜಯರಾಮ ಘೋರೆ್ಡ ಸರ್ಕಾರ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಂಜಯ ಗುರವ, ಮಾರುತಿ ಕವಲಾಪೂರೆ, ಶಿಕ್ಷಕರಾದ ಬಿ.ಬಿ.ಅಮ್ಮನಬಾವಿ, ಬಿ.ಡಿ.ನೇರ್ಲಿ, ಮಹೇಶ ಜೈನಾಪೂರೆ, ಹೇಮಾ ಹುದ್ದಾರ ಮುಂತಾದವರು ಇದ್ದರು.
ಮುಖ್ಯೋಪಾಧ್ಯಾಯ ಸಂಜು ಹುಲ್ಲೋಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶೀತಲ ಚೌಗಲಾ ನಿರೂಪಿಸಿದರು. ಶಿಕ್ಷಕಿ ಗೀತಾ ದೇಸೂರ ವಂದಿಸಿದರು.