ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಬೈಲಹೊಂಗಲ 17: ಅಪಘಾತ ಸಂಭವಿಸಿದ ವೇಳೆ ಸಾರ್ವಜನಿಕರು ಮೊಬೈಲ್ನಲ್ಲಿ ಅಪಘಾತದ ಚಿತ್ರಗಳನ್ನು ಸೆರೆಹಿಡಿಯುವುದನ್ನು ಬಿಟ್ಟು ಗಾಯಾಳುಗಳ ಪ್ರಥಮ ಚಿಕಿತ್ಸೆಯತ್ತ ಹೆಚ್ಚಿನ ಗಮನ ನೀಡುವುದರಿಂದ ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ ಮುಂಡಾಸ ಹೇಳಿದರು.
ಅವರು ಬುಧವಾರ ಪಟ್ಟಣದ ಸಾರಿಗೆ ಕಚೇರಿಯಲ್ಲಿ ನಡೆದ 32 ನೇ ರಾಷ್ರ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಜನರಲ್ಲಿ ಮೂಡಬೇಕು ಎನ್ನುವ ಉದ್ದೇಶದಿಂದ ಸಾರಿಗೆ ಇಲಾಖೆ ಈ ಸಪ್ತಾಹವನ್ನು ಆಯೋಜಿಸಿದೆ ಎಂದರು.
ಪಿಎಸೈ ಈರಪ್ಪ ರಿತ್ತಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಮೋಟಾರು ವಾಹನ ನಿರೀಕ್ಷಕ ಮಹೇಶ ಮಠಪತಿ ಮಾತನಾಡಿ, ಅಪಘಾತ ಆದ ಮೊದಲ ಒಂದು ಗಂಟೆ ಬಹಳ ಅಮೂಲ್ಯ. ಈ ಸಮಯದ ಒಳಗಾಗಿ ಚಿಕಿತ್ಸೆ ದೊರೆಯುವಂತೆ ಮಾಡುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಸಾರ್ವಜನಿಕರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರೆ ಅವರಿಗೆ ತೊಂದರೆ ಆಗದೆ ಇರುವಂತ ಕಾನೂನನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ತಂದಿದೆ ಎಂದರು.
ಡಾ.ಕಿರಣ ಮೂಡಲಗಿ, ಸುಪರಿಡೆಂಟ ಅವಿನಾಶ ಕಾವೇರಿ, ಕಚೇರಿ ಸಿಬ್ಬಂದಿಗಳಾದ ಶ್ರೀಧರಮೂರ್ತಿ, ಎಸ್.ಎಂ.ಕೋಲಕಾರ, ವಿಜಯಕುಮಾರ ಸೇರಿದಂತೆ ಸಾರ್ವಜನಿಕರು ಇದ್ದರು. ಸುಮಾರು 50 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.