ನಾಗರಾಳ: ಆಧ್ಯಾತ್ಮಿಕ ಪ್ರವಚನ ಯಶಸ್ವಿ ಮುಕ್ತಾಯ
ಲೋಕದರ್ಶನ ವರದಿ
ಚಿಕ್ಕೋಡಿ 03: ಆಧ್ಯಾತ್ಮಿಕ ಚಿಂತನೆ, ಸತ್ಸಂಗಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವ ಜೊತೆಗೆ ಮಾನವೀಯ ಮೌಲ್ಯಗಳು ವೃದ್ಧಿಸುತ್ತವೆ. ಜೀವನದಲ್ಲಿ ಶರಣರು, ದಾರ್ಶನಿಕರ ತತ್ವಾದರ್ಶನಗಳ ಪಾಲನೆಯಿಂದ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗರಾಳ ಗ್ರಾಮದಲ್ಲಿ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಸವಿನೆನಪಿಗಾಗಿ ಗ್ರಾಮದ ಸದ್ಭಕ್ತರು 12 ದಿನಗಳ ಕಾಲ ಬಸವಬೆಳವಿಯ ಚರಮೂರ್ತಿ ಚರತೇಶ್ವರ ವಿರಕ್ತಮಠದ ಶರಣಬಸವ ಸ್ವಾಮೀಜಿ ಅವರಿಂದ ಹಮ್ಮಿಕೊಂಡಿದ್ದ ಚೆನ್ನಬಸವ ದರ್ಶನ ಪ್ರವಚನಮಾಲೆಯ ಮಹಾಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಗರಾಳ ಗ್ರಾಮದ ಸದ್ಬಕ್ತರು ಭಕ್ತಿಭಾವದಿಂದ ಹಮ್ಮಿಕೊಂಡಿರುವ ಪ್ರವಚನದಿಂದ ಈ ಭಾಗದಲ್ಲಿ ಆಧ್ಯಾತ್ಮಿಕತೆಯ ವಾತಾವರಣ ಸೃಷ್ಟಿಯಾಗಿದ್ದು, ಪ್ರವಚನದುದ್ದಕ್ಕೂ ಶರಣ ಬಸವ ದೇವರು ನೀಡಿದ ಸಂದೇಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರವಚನ ಮಂಗಲ ನುಡಿಗಳನ್ನಾಡಿದ ಶರಣ ಬಸವದೇವರು, ಜೀವನದಲ್ಲಿ ಸುಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಳ್ಳಬೇಕು.ಆಧ್ಯಾತ್ಮದ ಮಳೆಯಿಂದ ಜ್ಞಾನ, ಮಾನವೀಯತೆಯ ಬೀಜ ಮೊಳಕೆಯೊಡೆಯುತ್ತದೆ. ಭಯದ ಧರ್ಮಕ್ಕಿಂತ ದಯದ ಧರ್ಮ ಪಾಲನೆ ಅತ್ಯಗತ್ಯವಾಗಿದೆ. ಯಾವ ದೇವರೂ ಪ್ರಾಣಿ ಬಲಿ ಕೇಳುವುದಿಲ್ಲ. ನಾವು ಬೇರೊಂದು ಜೀವಿಗೆ ಹಿಂಸೆ ನೀಡಿದರೆ, ನಮ್ಮ ಜೀವಕ್ಕೂ ಹಿಂಸೆ ಉಂಟಾಗುವುದು ನಿಶ್ಚಿತ, ಈ ಸತ್ಯವನ್ನು ಅರಿತುಕೊಂಡು ಪ್ರಾಣಿ ಹಿಂಸೆ ನಿಲ್ಲಿಸಬೇಕು ಎಂದು ಹೇಳಿದರು.
ಇಂದು ಪ್ರಕೃತಿ ವಿನಾಶದತ್ತ ಸಾಗುತ್ತಿದೆ. ಇದರಿಂದಾಗಿ ಜೀವ ಸಂಕುಲ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಪಂಚಭೂತಗಳನ್ನು ಶುದ್ಧವಾಗಿಟ್ಟುಕೊಂಡರೆ ಮಾತ್ರ ಜೀವ ಜಗತ್ತು ಸುರಕ್ಷಿತ ಎಂದು ನುಡಿದರು.
ಸದ್ಬಕ್ತ ಮಂಡಳಿಯ ಸಂಜು ನಾಯಿಕ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಾರ್ಥ ಮಡ್ಡೆ, ರಾಹುಲ್ ರೂಗೆ, ಸುನೀತಾ ಮಗದುಮ್ ಮತ್ತಿತರರು ಮಾತನಾಡಿದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಸಕಲ ವಾದ್ಯಮೇಳಗಳೊಂದಿಗೆ ವಿಶ್ವಗುರು ಬಸವಣ್ಣ ಮತ್ತು ಚೆನ್ನ ಬಸವಣ್ಣನವರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಿತು. ಯುವಕ-ಯುವತಿಯರಿಂದ ಸಮರ ಕಲೆ ಪ್ರದರ್ಶನ ಗಮನ ಸೆಳೆಯಿತು. ಪ್ರವಚನಕ್ಕೆ ದೇವರಾಜ ಯರಕಿಹಾಳ ಸಂಗೀತ ಮತ್ತು ಸಂಗಮೇಶ ಹೇರೂರ ತಬಲಾ ಸಾಥ್ ನೀಡಿದರು.
ಪ್ರಧಾನ ಕೋರೆ, ಅಣ್ಣಾಸಾಹೇಬ ಕಾಡಾಪೂರೆ, ಮಂಜುನಾಥ ಭೋರಗುಂಡೆ, ಮಾಣಿಕ ಮಾಳಿ, ಬಾಳು ಯರೋಳೆ, ಸಿದ್ದಾರ್ಥ ಕಾಂಬಳೆ, ಸಂಜಯ ಡಾಂಬಕೆ, ರಾಮದೇವ ಮಾಳಿ, ರಮೇಶ ಸನದಿ, ಸುನೀಲ ಮಾಳಿ, ಶಿವಾಜಿ ಹವಾಲ್ದಾರ, ಸಿದ್ದಪ್ಪ ಬೋರಗುಂಡೆ, ಅಜುನ ಮಾನೆ, ಜೀತೇಂದ್ರ ಮಡ್ಡೆ, ಯಲ್ಲಪ್ಪ ಕಟ್ಟಿ, ಸಂತೋಷ ಕಾಂಡಗಾವೆ, ದಾದಾಸಾಹೇಬ ಸಂಬು, ಪ್ರಕಾಶ ಕಾಂಬಳೆ, ಆನಂದ ವಾಡಕರ, ಸಿದ್ದಗೌಡ ದತ್ತವಾಡೆ, ಅಣ್ಣಪ್ಪ ಹೆಗ್ಗನ್ನವರ ಮುಂತಾದವರು ಇದ್ದರು.