ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸಲು ಎನ್.ಎಸ್.ಎಸ್ ಶಿಬಿರ ಸಹಕಾರಿ: ಎಂ.ಎಂ. ಮೃತ್ಯುಂಜಯ
ರಾಣಿಬೆನ್ನೂರು 26: ರಾಷ್ಟ್ರ ನಿರ್ಮಾನದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಸೇವಾ ಮನೋಭಾವ ಹಾಗೂ ರಾಷ್ಟ್ರ ಪ್ರೇಮ ಮೂಡಿಸಲು ಎನ್.ಎಸ್.ಎಸ್ ಶಿಬಿರ ಸಹಕಾರಿ ಎಂದು ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಎಂ.ಎಂ. ಮೃತ್ಯುಂಜಯ ಹೇಳಿದರು.
ತಾಲ್ಲೂಕಿನ ವೆಂಕಟಾಪುರ (ಕಾಕೋಳ ತಾಂಡಾ)ದಲ್ಲಿ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜಿನ ನಡೆದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ, ಆರೋಗ್ಯ, ಜಾಗೃತಿ, ಶ್ರಮದಾನ , ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಪ್ರಗತಿಪರ ಚಿಂತನ ಮನೋಭಾವ, ಮಕ್ಕಳು ಮತ್ತು ಮಹಿಳಾ ಜಾಗೃತಿ ಮೂಡಿಸುವುದರ ಜೊತೆಗೆ ಶಿಬಿರಾರ್ಥಿಗಳಲ್ಲಿ ಸಭಾ ಕಂಪನ ನಿವಾರಣೆ ಹಾಗೂ ಶ್ರಮದ ಮಹತ್ವ ಸಾರುವ ಇಂತಹ ಶಿಬಿರಗಳು ಬಾವಿ ಶಿಕ್ಷಕರಿಗೆ ಅತ್ಯಾವಶ್ಯಕ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶಶಿಕುಮಾರ ಲಮಾಣಿ ಮಾತನಾಡಿ, ಜೀವನ ಶೈಲಿ ಬದಲಿಸಲು, ಪ್ರತಿಭಾ ಪ್ರದರ್ಶನ ಮಾಡಲು ಮಾನಸಿಕ ದೈರ್ಯ ಹೆಚ್ಚಿಸುವ ಎನ್ಎಸ್ಎಸ್ ಶಿಬಿರಗಳು ಪ್ರಶಿಕ್ಷಣಾರ್ಥಿಗಳಿಗೆ ಪ್ರಮುಖವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮ ಏಳು ದಿನಗಳ ಅನುಭವವನ್ನು ಹಂಚಿಕೊಂಡರು. ಎನ್.ಎಸ್.ಎಸ್ ಕಾರ್ಯಕ್ರಾಮಾಧಿಕಾರಿ ಎ. ಶಂಕರ್ ನಾಯಕ್, ಸಹಾಯಕ ಕಾರ್ಯಕ್ರಮಾಧಿಕಾರಿ ಪರಶುರಾಮ ಪವಾರ ಕೃಷ್ಣಪ್ಪ ಲಮಾಣಿ , ಹನುಮಂತಗೌಡ ಗೌಡಗೇರಿ, ಉಪನ್ಯಾಸಕರಾದ ವಂದನಾ ಪಿ ಎನ್, ಪ್ರಿಯಾಂಕಾ ಮಲ್ಲಾಡದ, ಮುತ್ತುರಾಜ ಸಿದ್ಧಣ್ಣನವರ ಹಾಗೂ ಎಲ್ಲ ಶಿಬಿರಾರ್ಥಿಗಳು ಭಾಗವಹಿಸಿದ್ದರು.