ನನ್ನ ಜೀವನ, ನನ್ನ ಸ್ವಚ್ಛ ನಗರ ಕಾರ್ಯಕ್ರಮ ಉದ್ಘಾಟನೆ
ಶಿಗ್ಗಾವಿ 23: ಆರೋಗ್ಯಕರ ಬದುಕಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು ಅದುವೆ ಯಶಸ್ವಿ ಬದುಕಿನ ಗುಟ್ಟಾಗಿದೆ, ಪ್ರತಿಯೊಬ್ಬರೂ ಅದನ್ನು ಪಾಲಿಸುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಸವಣೂರ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪುರಸಭೆ ವತಿಯಿಂದ ನಡೆದ ‘ನನ್ನ ಜೀವನ, ನನ್ನ ಸ್ವಚ್ಛ ನಗರ' ಕಾರ್ಯಕ್ರಮ ಉದ್ಘಾಟಿಸಿದ ಅವರು, ಈ ಕಾರ್ಯಕ್ರಮ ಜೂನ್ 5ರ ವರೆಗೂ ಇರಲಿದ್ದು, ಸಾರ್ವಜನಿಕರು, ಅದರಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು. ನಗರದ ಸ್ವಚ್ಛತೆ ಪ್ರತಿಯೊಬ್ಬರ ಹೊಣೆ. ರೋಗ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಅವಶ್ಯವಾಗಿದೆ' ಎಂದರು.
ಪುರಸಭೆ ಮುಖ್ಯಾಧಿಕಾರಿ ಜಗದೀಶ ವಾಯ್ ಕೆ ಮಾತನಾಡಿ, ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು, ತ್ಯಾಜ್ಯದ ಮರುಬಳಕೆ ಮಾಡುವುದು, ತ್ಯಾಜ್ಯದ ಮರುಬಳಕೆ ಉಪಯೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿದೆ. ಮನೆ, ಮನೆಯಿಂದ ಕಸ ಸಂಗ್ರಹಣೆ ಮಾಡುವ ವಾಹನಗಳಿಗೆ ಎನ್ಜಿಒಗಳು, ಸಂಘಗಳು, ಸ್ವಯಂ ಸ್ವಸಹಾಯ ಸೇವಕರು, ರುಜಿನಗಳ ನಿಯಂತ್ರಣಕ್ಕೆ ಮುಂದಾಗಬೇಕು, ಎಲ್ಲರ ಸಹಭಾಗಿತ್ವದಿಂದ ಯೋಜನೆ ಯಶಸ್ವಿಯಾಗಲು ಸಾಧ್ಯವಿದೆ, ಸಾರ್ವಜನಿಕರು ತ್ಯಾಜ್ಯ ಸಂಗ್ರಹಣೆ ಅಂದೋಲದಲ್ಲಿ ಸೇರುವ ಮೂಲಕ ಆರೋಗ್ಯ ಮಂತ್ರ ಜಪಿಸಬೇಕಾಗಿದೆ. ಉಪಯೋಗಿಸಿದ ಸಾಮಗ್ರಿಗಳು, ಪ್ಲಾಸ್ಟಿಕ್ ಕ್ಯಾರಿಬಾಗ್, ಮಕ್ಕಳ ಪ್ಲಾಸ್ಟಿಕ್ ಆಟಿಕೆ ಸಾಮಗ್ರಿಗಳು, ಹಳೆಯ ಬಟ್ಟೆಗಳು, ಹಳೆಯ ಜೀನ್ಸ್, ಸಮವಸ್ತ್ರ, ಸೀರೆಗಳು, ಹಳೆ ಚಪಲಿ, ಶೂಗಳು, ಸುದ್ದಿ ಪತ್ರಿಕೆ, ಹಳೆಯ ಪುಸ್ತಕಗಳು ಹಾಗೂ ಎಲೆಕ್ನಿಕಲ್ ಸಾಮಗ್ರಿಗಳನ್ನು ಮರುಬಳಕೆ ಮಾಡಲಾಗುತ್ತಿದೆ. ಅದರ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು. ಬೇಡವಾದ ವಸ್ತುಗಳ ಮರುಬಳಕೆಗೆ ಅದ್ಯತೆ ನೀಡಲಾಗುತ್ತಿದೆ. ಅದರಿಂದ ಸಿಗುವ ಲಾಭಾಂಶಗಳನ್ನು ಮನವರಿಕೆ ಮಾಡಲಾಗುತ್ತಿದೆ ಎಂದರು.
ಪುರಸಭೆ ಸದಸ್ಯ ಪರಶುರಾಮ ಸೊನ್ನದ, ಪುರಸಭೆ ಅಧಿಕಾರಿ ಶೈಲಜಾ ಪಾಟೀಲ ಮಾತನಾಡಿದರು. ಪುರಸಭೆ ಸದಸ್ಯರಾದ ಗೌಸಖಾನ್ ಮುನಸಿ, ಜಾಫರಖಾನ್ ಪಠಾಣ, ಅಬ್ದುಲಖಾನ ನೀರಲಗಿ, ಮುನ್ನಾ ಲಕ್ಷೇಶ್ವರ, ರಾಜ್ಯ ಕಾರ್ಮಿಕರ ಸಂಘದ - ಅಧ್ಯಕ್ಷ ಫಕ್ಕೀರೇಶ ಶಿಗ್ಗಾವಿ, ಪುರಸಭೆ ಅಧಿಕಾರಿಗಳಾದ ವಿ.ಎಸ್. ಪಾಟೀಲ, ಎಸ್.ಬಿ. ಕಮಡೊಳ್ಳಿ, ಅಂಜನೇಪ್ಪ ಅಕ್ಕಮ್ಮ, ಛಾಯಾ, ಕಾಳೆ ಸೇರಿದಂತೆ ಪುರಸಭೆ ಪೌರ ಕಾರ್ಮಿಕರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.