ರಾಣೆಬೆನ್ನೂರ

ಸಂಗೀತವು ಪ್ರಾಣಾಯಾಮವಿದ್ದಂತೆ: ಡಾ.ವೃಷಬೇಂದ್ರಾಚಾರ್ಯ ಅರ್ಕಸಾಲಿ

ಸಂಗೀತವು ಪ್ರಾಣಾಯಾಮವಿದ್ದಂತೆ: ಡಾ.ವೃಷಬೇಂದ್ರಾಚಾರ್ಯ ಅರ್ಕಸಾಲಿ

ರಾಣೇಬೆನ್ನೂರು 02:  ಸಂಗೀತದಲ್ಲಿ ಸ್ವರವು ಮಾತಾ ಮತ್ತು ಲಯ ಪಿತಾ, ಸ್ವರ ಮತ್ತು ಲಯಗಳನ್ನು ಗಮನದಲ್ಲಿ ಇಟ್ಟು ಕೊಂಡು ಹಾಡಿದಾಗ ಸುಮಧರು ಸಂಗೀತವಾಗುತ್ತದೆ. ಕೇಳುಗರಿಗೆ ಆನಂದವನ್ನು ಕೊಡುತ್ತದೆ. ಸಂಗೀತವು ಪ್ರಾಣಾಯಾಮವಿದ್ದಂತೆ, ಸಂಗೀತದ ಸಾಧನೆಯಿಂದ ಸರಿಯಾದ ರೀತಿಯಲ್ಲಿ ಶ್ವಾಸೋಚ್ಚಾಸ ಕ್ರಿಯೆ ಉಂಟಾಗಿ ದೇಹಕ್ಕೆ ಪ್ರಾಣಶಕ್ತಿಯು ಯಥ್ಥೆಚ್ಚವಾಗಿ ಪೂರೈಕೆಯಾಗುತ್ತದೆ ಎಂದು ಹಿಂದೂಸ್ತಾನಿ ಗಾಯಕ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ವೃಷಬೇಂದ್ರಾಚಾರ್ಯ ಅರ್ಕಸಾಲಿ ಅವರು ಹೇಳಿದರು.

ಇಲ್ಲಿನ ಉಮಾಶಂಕರ ನಗರದಲ್ಲಿರುವ ಪಂಚ ಬ್ರಹ್ಮರ್ಷಿ ಸಭಾ ವೇದಿಕೆಯಲ್ಲಿ ವಿಶ್ವವಿಭು ಧ್ಯಾನಪೀಠ ಮತ್ತು ವಿಶ್ವರೂಪ ಲಲಿತಾ ನಿಕೇತನ ಸಂಯುಕ್ತಾಶ್ರಯದಲ್ಲಿ ಸಂಜೆ ಶಾಸ್ತ್ರೀಯ ಸಂಗೀತ ಕಲಿಕಾ ಪ್ರೇರಣಾ, ಸಂಗೀತ ಸಂಭ್ರಮ-2, ಸುಗಮ ಸಂಗೀತ ಹಾಗೂ ಭಕ್ತಿ ಗೀತೆ, ಭಾವಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದೇಹದಲ್ಲಿ ನಿರೋಧಕ ಶಕ್ತಿ ಉತ್ಪನ್ನವಾಗುವುದರಿಂದ ಯಾವ ಕಾಯಿಲೆಗಳೂ ಬರುವುದಿಲ್ಲ. ದೇಹವು ಸಧೃಢವಾಗುತ್ತದೆ. ಸಾಧಕನಲ್ಲಿ ಸೃಜನಶೀಲತೆ ಶಾಂತಿ ಸಮಾಧಾನ, ತಾಳ್ಮೆ ಗ್ರಹಣಶಕ್ತಿ, ಸ್ಮರಣ ಶಕ್ತಿಗಳು ವೃದ್ಧಿಯಾಗುತ್ತವೆ. ಆದ್ದರಿಂದ ತಂದೆ ತಾಯಿಗಳು ಮತ್ತು ಪಾಲಕರು ಮಕ್ಕಳಿಗೆ ಸಂಗೀತವನ್ನು ಕಲಿಯಲು ಪ್ರೇರಣೆ ಪ್ರೋತ್ಸಾಹ ಕೊಡಬೇಕೆಂದು ಅರ್ಕಸಾಲಿ ಅವರು ಸಲಹೆ ನೀಡಿದರು. 

ಶ್ರೀ ವಿಶ್ವವಿಭು ಧ್ಯಾನಪೀಠದ ಆಚಾರ್ಯ ಶ್ರೀ ಮೌನೇಶ್ವರ ಗುರೂಜೀ ಅವರು ಮಾತನಾಡಿ, ಸಂಗೀತದಲ್ಲಿ ರಸವಿದೆ, ಭಾವವಿದೆ, ಭಕ್ತಿ ಇದೆ, ಶಕ್ತಿ ಇದೆ, ಶಾಂತಿ ಇದೆ, ವಿರಹವಿದೆ, ಸರಸವಿದೆ, ಕರುಣೆ ಇದೆ, ರಂಜನೆ ಇದೆ, ರಸಿಕತೆ ಇದೆ, ಗಾಂಭೀರ್ಯವಿದೆ, ಸೌಚಿಧರ್ಯವಿದೆ, ಸಂಮ್ಮೊಹನವಿದೆ, ಓಂಕಾರವಿದೆ, ಶ್ರೀಂಕಾರವಿದೆ, ಕ್ರೀಂಕಾರವಿದೆ, ಹ್ರೀಂಕಾರವಿದೆ, ಯೋಗವಿದೆ, ಪ್ರಾಣಾಯಾಮವಿದೆ, ಜ್ಞಾನವಿದೆ, ಧ್ಯಾನವಿದೆ, ಧಾರಣವಿದೆ, ಸಮಾಧಿ ಇದೆ, ಸದ್ಗತಿ ಇದೆ ಇವೆಲ್ಲವೂಗಳನ್ನು ಹೊಂದಿರತಕ್ಕ ವಿದ್ಯೆ ಪ್ರಪಂಚದಲ್ಲಿ ಯಾವುದೂ ಇಲ್ಲ. ಆದ್ದರಿಂದ ಸಂಗೀತವು ಎಲ್ಲ ವಿದ್ಯೆಗಳಲ್ಲಿ ಶ್ರೇಷ್ಠವಾದುದಾಗಿದೆ ಎಂದರು. 

ಸಂಗೀತವು ಶರೀರವನ್ನು ಶುದ್ಧೀಕರಣಗೊಳಿಸುತ್ತದೆ. ಶರೀರ ಶುದ್ಧಿಯಿಂದ ಮನಸ್ಸು ಶುದ್ಧಿಯಾಗುತ್ತದೆ.ಮನಸ್ಸು ಶುದ್ಧವಾದಾಗ ಭಾವ ಶುದ್ಧಿಯಾಗುತ್ತದೆ. ಭಾವ ಶುದ್ಧಿಯಿಂದ ಆತ್ಮಶುದ್ಧಿಯಾಗುತ್ತದೆ. ಆತ್ಮಶುದ್ಧಿಯಿಂದ ಆನಂದ ಪ್ರಾಪ್ತವಾಗುತ್ತದೆ. ಆನಂದವೇ ಬ್ರಹ್ಮವಾಗಿರುತ್ತದೆ. ಮಕ್ಕಳು ಸಂಗೀತ ಕಲಿಯುವುದರಿಂದ ಮಾನಸಿಕ ಏಕಾಗ್ರತೆ, ಸ್ಮರಣಶಕ್ತಿ, ಗ್ರಹಣ ಶಕ್ತಿಗಳು ವೃದ್ಧಿಯಾಗುತ್ತದೆ. ದೈಹಿಕ, ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ಶರೀರದಲ್ಲಿಯ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳು ಜಾಗೃತವಾಗುತ್ತವೆ. ಅವರಲ್ಲಿಯ ಪ್ರತಿಭಾಶಕ್ತಿ ಪ್ರಕಾಶಗೊಳ್ಳುತ್ತದೆ. ಸಂಗೀತ ಕಲಿಯಲು ವಯಸ್ಸಿನ ಯಾವುದೇ ನಿರ್ಭಂದವಿರುವುದಿಲ್ಲ. ಕಿರಿಯರಿಂದ ಹಿರಿಯರವರೆಗೂ ಕಲಿಯಬಹುದಾದಂತಹ ಕಲೆಯಾಗಿದೆ ಎಂದು ಗುರೂಜೀ ನುಡಿದರು. 

ವೈದ್ಯ ಡಾ.ಚಂದ್ರಶೇಖರ ಕೇಲಗಾರ ಮಾತನಾಡಿ, ಸಂಗೀತದಿಂದ ಅನೇಕ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲಾಗುತ್ತದೆ. ಸಂಗೀತವು ಒಂದು ಸೃಜನಾತ್ಮಕ ಕಲೆಯಾಗಿದ್ದು, ಇದರಿಂದ ಮಾನಸಿಕ ಶಾಂತಿ, ಲಭಿಸುತ್ತದೆ. ತುಂಬಾ ಸಂತೋಷವನ್ನು ಕೊಡುವ ಕಲೆ ಸಂಗೀತವೇ ಆಗಿದೆ. ಸಂಗೀತ ಕಲೆಯ ವೃದ್ಧಿಗಾಗಿ ಪ್ರೇರಣೆ, ಪ್ರೋತ್ಸಾಹ ಅತ್ಯವಶ್ಯಕವಾಗಿದೆ ಎಂದರು. 

ನಿವೃತ್ತ ಕಾ.ಪಾ.ಅಭಿಯಂತರ ಶ್ಯಾಮರಾವ್ ನಿಂಬರಗಿ ಮಾತನಾಡಿ, ಕಲೆಯು ಮಾನವನಲ್ಲಿರುವ ಸುಪ್ತವಾದ ಪ್ರತಿಭೆ ಅದನ್ನು ಪ್ರಕಟಪಡಿಸುವುದಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಏರ್ಪಡಿಸುತ್ತಿರಬೇಕು. ಮಕ್ಕಳಿಗೆ ಕಲಿಯಲು ತಂದೆ-ತಾಯಿಗಳು ಹಾಗೂ ಪಾಲಕರು ಪ್ರೇರಣೆಯನ್ನು ಕೊಟ್ಟಾಗ ಮಾತ್ರ ಅವರಲ್ಲಿರುವ ಪ್ರತಿಭೆ ಪ್ರಕಟವಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ಆಚಾರ್ಯ ಮೌನೇಶ್ವರ ಗುರೂಜೀ ಅವರ ಕಾರ್ಯ ನಿಜಕ್ಕೂ ಶ್ಯಾಘನೀಯ  ಎಂದರು. 

ಇದೇ ಸಂದರ್ಭದಲ್ಲಿ ಆಚಾರ್ಯ ಮೌನೇಶ್ವರ ಗುರೂಜೀ ಹಾಗೂ ಲಕ್ಷ್ಮೀದೇವಿ ದಂಪತಿಗಳನ್ನು ಸನ್ಮಾನಿಸಲಾಯಿತು. 

ಟ್ರೆಡಿಷನಲ್ ರೇಕಿ ಮಾಸ್ಟರ್, ಬ್ಯಾಡಗಿ ಕಾಳಿ ಆಧ್ಯಾತ್ಮಿಕ ಶಕ್ತಿ ಪೀಠದ ಮಲ್ಲಿಕಾರ್ಜುನ ಗುರೂಜೀ ಮಾತನಾಡಿದರು. ಲಕ್ಷ್ಮೀದೇವಿ ಅಮ್ಮನವರು, ಡಾ. ವಾಸುದೇವಮೂರ್ತಿ, ಡಾ.ವಿದ್ಯಾ ವಾಸುದೇವಮೂರ್ತಿ, ಗೀತಾ ಸಿ, ಲಕ್ಷ್ಮೀದೇವಿ ಹೆಚ್, ರೋಹಿಣಿ ಎಂ, ನಳಿನಾ ಎಸ್, ಕೃಷ್ಣ ಬಿ, ಖಂಡೇಶ್, ಸುಹಾಸ, ವೃಷಬೇಂದ್ರ, ಆದರ್ಶ, ಪ್ರಸನ್ನ ಬಿ.ಕೆ, ವಿಜಯ ಜಿ.ಕೆ, ಗುರುರಾಜ ಶಿರಹಟ್ಟಿ ಸೇರಿದಂತೆ ಮತ್ತಿತರರು ಇದ್ದರು.  ಲತಾ ಟಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ