ಮುರುಘೇಂದ್ರ ಶಿವಯೋಗಿಗಳ ಚರಿತಾಮೃತ ಪ್ರವಚನ ಸಮಾರೋಪ
ಲೋಕದರ್ಶನ ವರದಿ
ಅಥಣಿ 26: ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ವರೆಗೆ ಕಟಗೇರಿ ಗ್ರಾಮದಲ್ಲಿ ನಡೆದ ಮುರುಘೇಂದ್ರ ಶಿವಯೋಗಿಗಳ ಚರಿತಾಮೃತ ಪ್ರವಚನ ಕಾರ್ಯಕ್ರಮದ ಸಮಾರೋಪ ಹಾಗೂ ಗ್ರಾಮದ ಮಹಿಳೆಯರ ಬಸವ ಬುತ್ತಿ, ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಬಸವ ಬುತ್ತಿ ಕಾರ್ಯಕ್ರಮಕ್ಕೆ ನದು ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಅಥಣಿ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿಯಯವರು ಗ್ರಾಮದ ಬಸವೇರ್ಶವರ ವೃತ್ತದಲ್ಲಿರುವ ಬಸವಣ್ಣನ ಪುತ್ಥಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಹಿಳೆಯರು ದಂಡಿ ಕಟ್ಟಿಕೊಂಡು ತಲೆ ಮೇಲೆ ತಮ್ಮ ಮನೆಯಿಂದ ತಂದ ಬುತ್ತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮಲ್ಲಯ್ಯನ ದೇವಸ್ಥಾನ ಆವರಣ ತಲುಪಿ ಸಮಾವೇಶಗೊಂಡಿತು.
ಮನೆಗಳಿಂದ ತಂದ ಬುತ್ತಿಯನ್ನು ಒಂದೆಡೆ ಸೇರಿಸಿ ಇಡೀ ಗ್ರಾಮದ ಜನತೆ ಒಂದಾಗಿ ಸಾಮರಸ್ಯದಿಂದ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ನದಿ ಇಂಗಳಗಾಂವ ಮಠದ ಸಿದ್ಧಲಿಂಗ ಸ್ವಾಮೀಜಿ ಒಂದು ತಿಂಗಳ ವರೆಗೆ ಕಟಗೇರಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಒಂದು ತಿಂಗಳ ಕಾಲ ಪ್ರವಚನ ನಡೆಯಿತು ಎಂದರು.
ಒಂದು ತಿಂಗಳ ಈ ಕಾರ್ಯಕ್ರಮದಲ್ಲಿ ಲಿಂಗ ದೀಕ್ಷೆ, ತಾಯಂದಿರುಗಳಿಗೆ ಉಡಿ ತುಂಬುವ, ನಿತ್ಯ ಪ್ರಸಾದ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬಂದಿರುವುದು ಈ ಕಾರ್ಯಕ್ರಮಕ್ಕೆ ಮೆರುಗು ನೀಡಿತು ಎಂದ ಅವರು ಕಲ್ಯಾನ ಅಥವಾ ಕೈಲಾಸ ಬೇರೆ ಎಲ್ಲಿಯೂ ಇಲ್ಲ ಎಲ್ಲವೂ ಕಟಗೇರಿ ಗ್ರಾಮದಲ್ಲಿದೆ ಎಂದರು.
ಕಟಗೇರಿ ಗ್ರಾಮದ ರೈತ ಸಂಘದ ಅಧ್ಯಕ್ಷ ಶಿವಾನಂದ ಖೋತ ಮಾತನಾಡಿ, ನದಿ ಇಂಗಳಗಾಂವ ಗ್ರಾಮದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಅದ್ದೂರಿಯಾಗಿ ಒಂದುತಿಂಗಳ ಕಾಲವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಪ್ರಥಂ ಬಾರಿಗೆ ಶ್ರಾವಣ ಸೇವಾ ಹಾಗೂ ಪ್ರವಚನ ಸಮೀತಿ ಕಾರ್ಯಕರ್ತರ ನೇತೃತ್ವದಲ್ಲಿ ನಡೆದಿದೆ ಎಂದರು.
ಕಟಗೇರಿ ಗ್ರಾಮ ಪಂಚಾಯತ ಸದಸ್ಯ ಗುರುಪಾದ ಸವದಿ ಮಾತನಾಡಿ, ಯಾವುದೇ ಜಾತಿ ಮತಗಳ ಭೇದ ಇಲ್ಲದೆ ಇದೇ ಮೊದಲ ಬಾರಿಗೆ ಕಾರ್ಯಕ್ರಮಗಳು ನಡೆದಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ, ಉತ್ತಮ ಸಮಾಜ ನಿರ್ಮಾಣ ಈ ಮೂಲಕ ಸಾಧ್ಯವಾಗುವುದು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ, ಹಬ್ಬಗಳ ಮಾಸ ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ತಿಂಗಳು ಇಂತಹ ಧಾರ್ಮಿಕ ಕಾರ್ಯಗಳು ಜರುಗಿರುವುದು ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನರಸಪ್ಪ ಮಹಿಷವಾಡಗಿ, ಗುರುಶಾಂತ ಕರಡಿಮಠ ಸೇರಿದಂತೆ ಶ್ರಾವಣ ಸೇವಾ ಹಾಗೂ ಪ್ರವಚನ ಸಮೀತಿ ಪದಾಧಿಕಾರಿಗಳು, ಕಾರ್ಯಮರ್ತರು, ಸಾವಿರಾರು ಸಂಖ್ಯೆಯಲ್ಲಿ ತಾಯಂದಿರು ಭಾಗವಹಿಸಿದ್ದರು.