ನಗರಸಭೆಗೆ ಅಧ್ಯಕ್ಷರೇ ಸುಪ್ರೀಂ: ಶಾಸಕರ ಪ್ರಗತಿಪರಿಶೀಲನಾ ಸಭೆ ನಿಯಮ ಬಾಹೀರ
ರಾಣೇಬೆನ್ನೂರ: ಸ್ಥಳೀಯ ನಗರಸಭೆಯಲ್ಲಿ ಶಾಸಕ ಅರುಣಕುಮಾರ ಪೂಜಾರವರು ಅವರದೇ ಪಕ್ಷದ ನಗರಸಭೆ ಅಧ್ಯಕ್ಷರನ್ನು ದೂರವಿಟ್ಟು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತಿದ್ದಾರೆ. ಇವರ ಎಲ್ಲೆ ಮೀರಿದ ನಡತೆಯ ವಿರುದ್ಧ ಪೌರಾಡಳಿತ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಶಾಸಕರ ವರ್ತನೆ ಕುರಿತು ಗಂಭೀರವಾಗಿ ಆರೋಪಿಸಿದರು.
ಶಾಸಕ ಅರುಣಕುಮಾರ ಪೂಜಾರ ಅವರು ಇತ್ತೀಚೆಗೆ ನಗರಸಭೆಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿಯವರ ಅನುಪಸ್ಥಿತಿಯಲ್ಲಿ ನಡೆಸಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಇದರಲ್ಲಿ ಪೌರಾಯುಕ್ತರು ಮಿಲಾಪಿಯಾಗಿದ್ದು, ಈ ಬಗ್ಗೆ ಪೌರಾಡಳಿತ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು.
ನಗರಸಭೆಗೆ ಅಧ್ಯಕ್ಷರೇ ಸುಪ್ರಿಂ ಆಗಿದ್ದಾರೆ. ಅವರನ್ನು ದೂರವಿಟ್ಟು ಪ್ರಗತಿ ಪರಿಶೀಲಿಸಿದ್ದು ಕಾನೂನು ಬಾಹೀರವಾಗಿದೆ. ಇವರಲ್ಲಿ ಆಡಳಿತದ ಹೊಂದಾಣಿಕೆ ಇಲ್ಲದಿರುವುದು ಸದಸ್ಯರಿಗೆ ಹಾಗೂ ನಾಗರೀಕರಿಗೆ ಬಹಳಷ್ಟು ತೊಂದರೆಯಾಗಿದೆ. ಪೌರಾಯುಕ್ತರಾದರೂ ಸಹ ಈ ಬಗ್ಗೆ ಶಾಸಕರ ಗಮನಕ್ಕೆ ತರಬಹುದಿತ್ತು. ಆದರೆ ಅವರೂ ಸಹ ಶಾಸಕರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಪಾಧಿಸಿದರು.
ಇಲ್ಲಿಯವರೆಗೂ ಅಧಿಕಾರ ನಡೆಸಿದ ಯಾವ ಶಾಸಕರೂ ಸಹ ಇವರ ರೀತಿ ಅಧ್ಯಕ್ಷರನ್ನು ಕಡೆಗಣಿಸಿ ಸಭೆ ನಡೆಸಿದ ಉದಾಹರಣೆಗಳಿಲ್ಲ. ಶಾಸಕರು ನಗರಸಭೆಗೆ ಸದಸ್ಯರಷ್ಟೇ. ಅಧ್ಯಕ್ಷರನ್ನು ಗೌಣವಾಗಿಸುವ ನಡೆ ಖಂಡನಾರ್ಹವಾಗಿದೆ ಎಂದು ಹೇಳಿದರು.
ಪ್ರವಾಸಿ ಮಂದಿರದ ಪಕ್ಕದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದು, ಇದು ಕಳಪೆಯಾಗಿದೆಯೆಂದು ಶಾಸಕರು ಆಪಾದಿ ಸಿದ್ದು, ಗುತ್ತಿಗೆದಾರ ಎಂ.ಕೆ.ರಹಿಮಾನ್ರವರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸದೆ ಕಂಟ್ರಾಕ್ಟದಾರ ಹೆಚ್.ಎಂ.ನಾಯಕ್ ರವರ ಮೇಲೆ ಕ್ರಮ ಜರುಗಿಸಲಾಗುವುದು. ಇವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಆದೇಶಿಸಿರುವುದು ನ್ಯಾಯಸಮ್ಮತವಲ್ಲ. ಇದೇ ರೀತಿ ಅನೇಕ ಕಡೆ ಕಳಪೆ ಕಾಮಗಾರಿಯಾಗಿದ್ದು, ಇದರ ಬಗ್ಗೆ ಚಕಾರವೆತ್ತದ ಶಾಸಕರು ಕೇವಲ ತಮಗೆ ಸಹಕಾರಿಯಾಗದ ಕಂಟ್ರಾಕ್ಟದಾರರ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸುತ್ತಿರುವುದು ಸರಿಯಲ್ಲವೆಂದು ಹೇಳಿದ ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಈ ಸಂಧರ್ಭದಲ್ಲಿ ಕೋಡಿಹಳ್ಳಿ ಅಭಿಮಾನಿಗಳು ಉಪಸ್ಥಿತರಿದ್ದರು.