ಖಲಾಸ್ ಚಿತ್ರಕ್ಕೆ ಮುಹೂರ್ತ
ಬೆಂಗಳೂರು, ನ. 02: ಬಿ ಎಸ್ ಆರ್ ಫಿಲ್ಮ್ಸ್ ಲಾಂಛನದಲ್ಲಿ ತೆಲುಗಿನ ಬೋಯಪತಿ ಸುಬ್ಬರಾವ್ ಅವರು ನಿರ್ಮಿಸುತ್ತಿರುವ, ಶಶಿಕಾಂತ್ ಆನೇಕಲ್ ನಿರ್ದೇಶನದ "ಖಲಾಸ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಹಿಂದೆ "ಜನಗಣಮನ" ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಸಹ ಆಗಿ ಜನಪ್ರಿಯವಾಗಿದೆ. "ಖಲಾಸ್" ನನ್ನ ಎರಡನೇ ನಿರ್ದೇಶನದ ಚಿತ್ರ. ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಯ ನಡುವೆ ನಡೆಯುವ ಕಥಾಹಂದರ. ರೌಡಿಗಳನ್ನು ಬೆಳೆಸುವುದು ನನ್ನ ಜೀವನ ಎಂದು ರಾಜಕಾರಣಿ ಹೇಳಿದ್ದರೆ, ಅಂತಹ ರೌಡಿಗಳನ್ನು ಮಟ್ಟ ಹಾಕುವುದೇ ನನ್ನ ಜೀವನ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಇದೇ ಚಿತ್ರದ ಕಥಾವಸ್ತು ಎಂದು ನಿರ್ದೇಶಕ ಶಶಿಕಾಂತ್ ಆನೇಕಲ್ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಆಯೇಷಾ ಅಭಿನಯಿಸುತ್ತಿದ್ದಾರೆ. ಅವರು ನನ್ನ "ಜನಗಣಮನ" ಚಿತ್ರದಲ್ಲೂ ಅಭಿನಯಿಸಿದ್ದರು. ತೆಲುಗಿನ ಖ್ಯಾತ ನಟ ಸುಮನ್, ಉಮೇಶ್ ಬಣಕಾರ್, ಕುರಿ ರಂಗ ಹಾಗೂ ಅತಿಥಿಪಾತ್ರದಲ್ಲಿ ರವಿಕಾಳೆ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದ್ದಾರೆ.
ನಾಯಕಿ ಆಯೇಷಾ ದಿಟ್ಟ ಪೊಲೀಸ್ ಅಧಿಕಾರಿಯಾಗಿ ಅಭನಯಿಸುತ್ತಿದ್ದಾರೆ. ಉಮೇಶ್ ಬಣಕಾರ್ ಕಾರ್ಪೊರೇಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಕುರಿ ರಂಗ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಕ್ಲಾರೆನ್ಸ್ ಅಲೇನ್ ಕ್ರಿಸ್ಟ ಸಂಗೀತದ ಬಗ್ಗೆ ಹಾಗೂ ಸಿದ್ದಾರ್ಥ್ ರಾಜ್ ಅವರು ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು. ಈ ಚಿತ್ರಕ್ಕೆ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲಿರುವ "ಖಲಾಸ್" ಚಿತ್ರಕ್ಕೆ ‘ದುನಿಯಾ ಬದಲಾದರೂ ಮಗ್ಗಿ ಬದಲಾಗಲ್ಲ’ ಎಂಬ ಅಡಿಬರಹವಿದೆ.