ಹೆರಿಗೆಯಾದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡಬೇಕು: ಶಿವಾನಂದ ವಿ.ಪಿ.

ಹೆರಿಗೆಯಾದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡಬೇಕು: ಶಿವಾನಂದ ವಿ.ಪಿ.  Mothers should breastfeed within one hour of delivery: Shivananda V.P.

ಬಳ್ಳಾರಿ, ಆ.6: ಹೆರಿಗೆಯಾದ ಒಂದು ಗಂಟೆಯೊಳಗೆ ನವಜಾತ ಶಿಶುವಿಗೆ ತಾಯಿಯ ಎದೆಹಾಲು ನೀಡುವುದು ಅತ್ಯಗತ್ಯವಾಗಿದ್ದು, ಜನನದ ನಂತರ ಮೊದಲ ಆರು ತಿಂಗಳವರೆಗೆ ಎದೆಹಾಲು ಮಾತ್ರವೇ ನೀಡಬೇಕು. ಈ ಅವಧಿಯಲ್ಲಿ ನೀರು ಸೇರಿದಂತೆ ಯಾವುದೇ ಇತರೆ ಆಹಾರ ಅಥವಾ ದ್ರವ ಪದಾರ್ಥಗಳನ್ನು ನೀಡಬಾರದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ತಿಳಿಸಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್ಸಿಎಚ್ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮರಿಸ್ವಾಮಿ ಮಠ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೀರ​‍್ಪ ಮಠ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ತಾಯಿಯ ಎದೆಹಾಲು ಮಗುವಿನ ಸಂಪೂರ್ಣ ಬೆಳವಣಿಗೆಗೆ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅತಿಸಾರ ಸೇರಿದಂತೆ ವಿವಿಧ ಸೋಂಕುಗಳಿಂದ ಮಗುವನ್ನು ರಕ್ಷಿಸುವುದರ ಜೊತೆಗೆ ತಾಯಿ-ಮಗುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.  

ಆರು ತಿಂಗಳ ನಂತರ ಒಂದು ವರ್ಷದವರೆಗೆ ಎದೆಹಾಲಿನೊಂದಿಗೆ ಮನೆಯಲ್ಲೇ ತಯಾರಿಸಿದ ಪೂರಕ ಆಹಾರವನ್ನು ನೀಡಬೇಕು. ಒಂದು ವರ್ಷದಿಂದ ಎರಡು ವರ್ಷದವರೆಗೆ ಮೃದುವಾದ ಆಹಾರದ ಜೊತೆಗೆ ಎದೆಹಾಲು ನೀಡುವುದನ್ನು ಮುಂದುವರಿಸುವುದು ಅಗತ್ಯ ಎಂದು ತಿಳಿಸಿದರು.  

ಎದೆಹಾಲುಣಿಸುವುದರಿಂದ ತಾಯಿಯ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿದ್ದು, ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುವುದರ ಜೊತೆಗೆ ಮುಂದಿನ ಗರ್ಭಧಾರಣೆಯನ್ನು ಸಹಜವಾಗಿ ಮುಂದೂಡಲು ಸಹಕಾರಿಯಾಗುತ್ತದೆ. ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಸ್ತನ್ಯಪಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.  

ಈ ವರ್ಷದ ವಿಶ್ವ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯ "ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ" ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.