ಮುಂದಗೋಡ

ಮಾಸಿಕ ಶಿವಾನುಭವ, ಪ್ರತಿಭಾ ಪುರಸ್ಕಾರ

ಮಾಸಿಕ ಶಿವಾನುಭವ, ಪ್ರತಿಭಾ ಪುರಸ್ಕಾರ

ಮುಂಡರಗಿ 03:  ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಬೆಳವಣಿಕೆ ಕಾಣಲು ಹಾಗೂ ಜೀವನದಲ್ಲಿ ಸದ್ಗತಿ ಪಡೆಯಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಈ ಕಾರಣದಿಂದ ನಮ್ಮ ಪೂರ್ವಜರು ದೇವರಿಗಿಂತಲೂ ಗುರು ಅಧಿಕ ಎಂದು ಹೇಳಿದ್ದಾರೆ. ಯಾರು ಗುರುವಿನಲ್ಲಿ ನಿಷ್ಟೆ, ಶ್ರದ್ಧೆ ಹಾಗೂ ಭಕ್ತಿಯನ್ನು ಹೊಂದಿರುತ್ತಾರೆಯೋ ಅವರು ಜೀವನದಲ್ಲಿ ಬಹುಬೇಗ ಯಶಸ್ಸು ಕಾಣುತ್ತಾರೆ ಎಂದು ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ತಿಳಿಸಿದರು. 

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ, ಪ್ರತಿಭಾ ಪುರಸ್ಕಾರ, ಗುರು ವಂದನೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 

ಮಾನವ ಕುಲದಲ್ಲಿನ ಎಲ್ಲರೂ ಸುಂದರವಾದ ಬದುಕನ್ನು ಸಾಗಿಸಬೇಕಾದರೆ ಎಲ್ಲರಲ್ಲೂ ಸೇವಾ ಮನೋಭಾವನೆ ಹಾಗೂ ಸಂಸ್ಕಾರಯುತವಾದ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಭವ್ಯವಾದ ಜೀವನವನ್ನು ಸಾಗಿಸಬಹುದು ಎಂದು ಹೇಳಿದರು. 

ಶ್ರೀಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ, ನಮ್ಮ ಪುರಾಣ ಹಾಗೂ ಇತಿಹಾಸಗಳಲ್ಲಿ ಗುರು-ಶಿಷ್ಯ ಪರಂಪರೆಗು ತುಂಬಾ ಮಹತ್ವವಿದೆ. ಗುರು ಗೋವಿಂದ-ಶಿಶುನಾಳ ಶರೀಪ, ಏಕಲವ್ಯ-ದ್ರೋಣಾಚಾರ್ಯ, ಪರಮಹಂಸ-ವಿವೇಕಾನಂದ ಮೊದಲಾದವರು ತಮ್ಮ ಗುರು-ಶಿಷ್ಯ ಸಂಬಂಧದಿಂದ ಜಗದ್ವಿಖ್ಯಾತರಾದರು ಎಂದು ತಿಳಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್‌.ಬಾರ್ಕಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏನ್ನಾದರೂ ಸಾಧಿಸಬೇಕು ಎನ್ನುವ ತುಡಿತವಿದ್ದರೆ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ಪಾವಟೆ ಅವರು ಜೀವನದಲ್ಲಿ ಮಹಾತ್ವಾಂಕ್ಷೆಯನ್ನು ಹೊಂದಿದ್ದರು ಮತ್ತು ಅದು ಈಡೇರಲು ಸದಾ ಶ್ರಮಿಸಿದರು. ಅಂತಹ ಮಹಾತ್ಮರು ನಮ್ಮ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ತಿಳಿಸಿದರು. 

ಈಚೆಗೆ ಜರುಗಿದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ತಾಲ್ಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಡಾ.ಅನ್ನದಾನೀಶ್ವರ ಸ್ವಾಮಿಜಿ ಅವರು ಸನಮಾನಿಸಿದರು. ಶಿವಾನುಭವದ ಭಕ್ತಿ ಸೇವೆ ವಹಿಸಿಕೊಂಡಿದ್ದ ಎಸ್‌.ಡಿ.ಚವಡಿ ದಂಪತಿ, ವೀರೇಶ ಬಾಗೋಡಿ ಅವರನ್ನು ಸನ್ಮಾನಿಸಲಾಯಿತು. 

ಡಾ.ವೀರಣ್ಣ ನಿಂಗೋಜಿ ಅವರು ಉಪನ್ಯಾಸ ನೀಡಿದರು. ಜಗದ್ಗುರು ಅಕ್ಕನ ಬಳಗದವರಿಂದ ಸಂಗೀತ ಸೇವೆ ಜರುಗಿತು. ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಸರ್ವರನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಡಿದರು. ಎಸ್‌.ಆರ್‌.ರಿತ್ತಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ