ಮೋಳೆ ಓಘ ಸಿದ್ದೇಶ್ವರ ಜಾತ್ರೆ; ಅದ್ದೂರಿಯಾಗಿ ನಡೆದ ದೇವರ ಭೇಟ್ಟಿ ಕಾರ್ಯಕ್ರಮ..!
ಕಾಗವಾಡ 18: ತಾಲೂಕಿನ ಮೋಳೆ ಗ್ರಾಮದ ಓಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ರವಿವಾರ ದಿ. 17 ರಿಂದ ಅದ್ದೂರಿಯಾಗಿ ಪ್ರಾರಂಭಗೊಂಡಿತು. ಜಾತ್ರೆಯ ನಿಮಿತ್ತ ವಿವಿಧ ಗ್ರಾಮಗಳಿಂದ ಆಗಮಿಸಿದ ದೇವರ ಪಲ್ಲಕ್ಕಿಗಳ ಭೇಟ್ಟಿ ಕಾರ್ಯಕ್ರಮ ಗ್ರಾಮದ ಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರದಂದು ನಡೆಯುವ ಜಾತ್ರೆಗೆ ನಿನ್ನೆ ವಿವಿಧ ಗ್ರಾಮಗಳಿಂದ ಆಗಮಿಸಿದ ಉತ್ಸವ ಮೂರ್ತಿ ಹಾಗೂ ದೇವರ ಪಲ್ಲಕ್ಕಿಗಳಾದ ಅಚ್ಚೆಗಾಂವ ಗ್ರಾಮದ ಶೀಲಿಸಿದ್ದ ದೇವರ ಪಲ್ಲಕ್ಕಿ, ಕೆಂಪವಾಡ ಗ್ರಾಮದ ಮಲಕಾರಿಸಿದ್ದ ದೇವರ ಪಲ್ಲಕ್ಕಿ, ಕವಲಗುಡ್ಡ ಗ್ರಾಮದ ಕರಿಯೋಗಿ ಸಿದ್ದ ದೇವರ ಪಲ್ಲಕ್ಕಿ, ಕೆಂಪವಾಡ ಗ್ರಾಮದ ಭೂತಾಳಸಿದ್ದ ದೇವರ ಹಾಗೂ ಮೋಳೆ ಗ್ರಾಮದ ಭೂತಾಳಸಿದ್ದ ದೇವರಗಳು ಜಾತ್ರೆಯ ನಿಮಿತ್ತ ಭೇಟ್ಟಿ ಕಾರ್ಯಕ್ರಮ ರವಿವಾರ ದಿ. 17 ರಂದು ಮಳೆಯ ಮಧ್ಯೆದಲ್ಲಿಯೂ ಅದ್ದೂರಿಯಾಗಿ ನಡೆಯಿತು. ಭಕ್ತರು ಭಂಡಾರದಲ್ಲಿ ಮಿಂದೆದ್ದರು.
ಭೇಟ್ಟಿ ಕಾರ್ಯಕ್ರಮ ನೋಡಲು ನೆರೆಯ ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಬಂದು ದೇವರ ಪಲ್ಲಕ್ಕಿಗಳ ಮೇಲೆ ಖಾರೀಕ, ಭಂಡಾರ, ಬಾಳೆಹಣ್ಣು ಎರಚಿ ತಮ್ಮ ಇಷ್ಟದ ದೇವರಿಗೆ ಹರಕೆ ತೀರಿಸಿದರು.
ನಂತರ ಎಲ್ಲ ಗ್ರಾಮಗಳ ದೇವರ ಪಲ್ಲಕ್ಕಿಗಳನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಮೂಲಕ ಸಾಗಿ ಗ್ರಾಮದ ಮಧ್ಯ ಸ್ಥಳದಲ್ಲಿ ರಾತ್ರಿ ಇದ್ದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಲಿವೆ. ನಿನ್ನೆ ರಾತ್ರಿ ವಿವಿಧ ಡೊಳ್ಳಿನ ಗಾಯನ ತಂಡಗಳಿಂದ ಡೊಳ್ಳಿನ ಗಾಯನ ಕಾರ್ಯಕ್ರಮಗಳು ನಡೆದವು.