ರಾಣೆಬೆನ್ನೂರ

ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ: ಕಾನೂನು ಕ್ರಮ ಜರುಗಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ

ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ: ಕಾನೂನು ಕ್ರಮ ಜರುಗಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ

ರಾಣಿಬೆನ್ನೂರ:27 ತಿರುಪತಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಮಿಶ್ರಣ ಮಾಡಿರುವವರನ್ನು ತಕ್ಷಣ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ,  ಹಿಂದು ಜಾಗರಣ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದು ಜಾಗರಣ ಸಮಿತಿಯ ಸದಸ್ಯ ಹಾಗೂ  ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರುಡಿಕಟ್ಟಿ  ಮಾತನಾಡಿ,  ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿನ  ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿರುವುದು ಹಿಂದೂಗಳಿಗೆ ಬಹಳಷ್ಟು ನೋವುಂಟಾಗಿದೆ ಎಂದರು.  

ಆಂಧ್ರ​‍್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಬಹಿರಂಗಪಡಿಸಿದ ನಂತರ ಜಗತ್ತಿನಲ್ಲಿನ ಹಿಂದೂ ಜನಾಂಗದಲ್ಲಿ ತೀವ್ರ ಆಕ್ರೋಶದ ಅಲೆ ಭುಗಿಲೆದ್ದಿದೆ. ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸುವುದು, ಇದು ಕೇವಲ ಕಲಬೆರಿಕೆ ಅಲ್ಲದೆ ಹಿಂದೂಗಳ ಧರ್ಮಶ್ರದ್ಧೆಯ ಮೇಲೆ ಪ್ರಯತ್ನ ಪೂರ್ವಕವಾಗಿ ಮಾಡಿರುವ ಧಾರ್ಮಿಕ ಆಘಾತವಾಗಿದೆ. ಇದು ಹಿಂದೂಗಳ ಜೊತೆಗೆ ಮಾಡಿರುವ ವಿಶ್ವಾಸ ಘಾತವೇ ಆಗಿದೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಇವರು ಮುಖ್ಯಮಂತ್ರಿ ಆಗಿರುವಾಗ ತಿರುಪತಿ ದೇವಸ್ಥಾನದ ಪವಿತ್ರ ಲಡ್ಡು ತಯಾರಿಸುವ ಕಾಂಟ್ರಾಕ್ಟ್‌ ಒಂದು ಕ್ರೈಸ್ತ ಕಂಪನಿಗೆ ನೀಡಿದ್ದರು ಎಂದು ದೂರಿದರು.  

ಹಿಂದು ಜಾಗರಣ ಸಮಿತಿಯ ಸದಸ್ಯ ಶಿವಾನಂದ ಸಾಲಗೇರಿ ಮಾತನಾಡಿ, ದೇವಸ್ಥಾನದ ಟ್ರಸ್ಟಿ ಸ್ಥಾನದಲ್ಲಿ ಒಬ್ಬ ಕ್ರೈಸ್ತ ವ್ಯಕ್ತಿಯನ್ನು ನೇಮಿಸಿದ ಪರಿಣಾಮ ದೇವಸ್ಥಾನ ಪರಿಸರದಲ್ಲಿ ಕ್ರೈಸ್ತ ಮಿಶಿನರಿಗಳ ಮೂಲಕ ಮತಾಂತರಕ್ಕೆ ಪ್ರೋತ್ಸಾಹ ನೀಡಿದ್ದರು ಇನ್ನೂ ಮುಂತಾದ ಅನೇಕ ಪಾಪ ಕೃತ್ಯಗಳು ಆ ಕಾಲದಲ್ಲಿ ನಡೆದಿದ್ದವು. ಅದರದೇ ಮುಂದುವರೆದ ಭಾಗ ಎಂದರೆ ಈ ಪ್ರಸಾದದ ಲಡ್ಡುವಿನಲ್ಲಿ ಕೊಬ್ಬು ಸೇರಿಸಿ ಹಿಂದೂಗಳ ಧರ್ಮಭ್ರಷ್ಟ ಮಾಡುವ ಷಡ್ಯಂತ್ರ ರಚಿಸಲಾಗಿತ್ತು ಎಂದು ಪ್ರತಿಪಾದಿಸಿದ ಅವರು, ಯಾರು ಈ ಮಹಾ ಪಾಪ ಕೃತ್ಯವೆಸಗಿದವರ ಮೇಲೆ ದೂರು ದಾಖಲಿಸಿ ಅವರನ್ನು ತಕ್ಷಣ ಬಂದಿಸಬೇಕು ಎಂದು ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ಜಿ.ಜಿ. ಹೊಟ್ಟಿಗೌಡರ, ಸಿ.ಆರ್‌. ನಂದಿಹಳ್ಳಿ, ಹನುಮಂತಪ್ಪ ಹೆದ್ದೇರಿ, ಶಿವಯೋಗಿ ಹಳ್ಳಳ್ಳಿ, ಕಿರಣ್ ಅಂತರವಳ್ಳಿ,  ಪರಮೇಶಪ್ಪ ಕದಂಬ, ಸಚಿನ ದಾನಪ್ಪನವರ, ಹನುಮಂತ ಶಿವಲಿಂಗಪ್ಪನವರ, ಪ್ರಸನ್ನ ಬಣಕಾರ, ಹನುಮಂತಪ್ಪ ಹಾದಿಮನಿ, ಹರೀಶ ನೆಲವಿಗಿ, ಸುರೇಶ್ ದೂಳೆಹೊಳಿ, ವಿಜಯಕುಮಾರ್ ಹುಗ್ಗಿ, ಮಾತಾಂರ್ಡ ಕುಲಕರ್ಣಿ, ಸಿದ್ದು ಹಾವೇರಿ, ಶಿವಾಜಿ ಆರೇರ, ಹನುಮಂತಪ್ಪ ಮಾಗೋಡ, ಮಾಲತೇಶ, ಬಸವರಾಜ ಅಂತರವಳ್ಳಿ ಮತ್ತಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ