ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ವಿ.ಎಸ್.ಪಾಟೀಲ ಬಣದ ಸದಸ್ಯರ ಮೇಲುಗೈ
ಲೋಕದರ್ಶನ ವರದಿ
ಮುಂಡಗೋಡ: ಯಲ್ಲಾಪುರ ವಿಧಾನಸಭಾ ಚುನಾವಣೆ ನಂತರ ಭಾರೀ ಕುತೂಹಲ ಕೆರಳಿಸಿದ್ದ ತಾಲೂಕಿನ ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ನಾಗರಾಜ ಬೆಂಡಿಗೇರಿ, ನಾರಾಯಣ ತಿರಕಣ್ಣನವರ, ಬಲವಂತ ಚಿಗಪ್ಪನವರ, ಮಂಜುನಾಥ ಪಾಟೀಲ ಹಾಗೂ ವಿಠ್ಠಲ ಚಿಗಪ್ಪನವರ ಆಯೆಯಾಗಿದ್ದು ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೃಷ್ಣಪ್ಪ ವಡ್ಡರ, ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿ ಕೃಷ್ಣಪ್ಪ ಪೂಜಾರ, ಹಿಂದುಳಿದ ಅ ವರ್ಗದಿಂದ ಮೌಲಾಲಿ ಹುಬ್ಬಳ್ಳಿ, ಹಿಂದುಳಿದ ಬ ವರ್ಗದಿಂದ ಮಾಜಿ ಶಾಸಕ ವಿ.ಎಸ್.ಪಾಟೀಲ ಹಾಗೂ ಮಹಿಳಾ ಕ್ಷೇತ್ರದಿಂದ ಬಾಗುಬಾಯಿ ಶಿಂಧೆ, ಸರಸ್ವತಿ ಮಶಾಳಕರ ಆಯ್ಕೆಯಾದರೆ ಸಾಲಗಾರರಲ್ಲದ ಕ್ಷೇತ್ರದಿಂದ ಬಸಪ್ಪ ಧಾರವಾಡ ಅವರು ಆಯ್ಕೆಯಾಗಿದ್ದಾರೆ.
ನ್ಯಾಯಾಲಯ ಆದೇಶದಂತೆ ಫಲಿತಾಂಶ ಪ್ರಕಟ: 12 ಜನ ಸದಸ್ಯ ಬಲವಿರುವ ಸಹಕಾರಿ ಸಂಘದಲ್ಲಿ ಸಾಲಗಾರರಲ್ಲದ ಒಬ್ಬ ಸದಸ್ಯರ ಅವಿರೋಧ ಆಯ್ಕೆ ನಡೆದಿದ್ದರಿಂದ ಇನ್ನುಳಿದ 11 ಸದಸ್ಯ ಸ್ಥಾನಕ್ಕೆ ಜೂ.18ರಂದು ಚುನಾವಣೆ ನಡೆದಿತ್ತು. ಸಂಘದಲ್ಲಿ 1340 ಶೇರುದಾರರಿದ್ದರೂ ಕೂಡ ನಿಯಮದಂತೆ ಕಳೆದ 5 ವರ್ಷ ಅವಧಿಯಲ್ಲಿ ಕನಿಷ್ಠ 2 ಸಾಮಾನ್ಯ ಸಭೆಗೆ ಹಾಜರಾದ 281 ಜನರಿಗೆ ಮಾತ್ರ ಮತದಾನ ಹಕ್ಕು ಸಿಕ್ಕಿತ್ತು. ಇದನ್ನು ಪ್ರಶ್ನಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ನವರು, ಪ್ರತಿಯೊಬ್ಬ ಶೇರುದಾರರಿಗೂ ಮತದಾನ ಹಕ್ಕು ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯ 750ಕ್ಕೂ ಅಧಿಕ ಜನರಿಗೆ ಮತದಾನ ಹಕ್ಕು ನೀಡಲು ಅವಕಾವಿಲ್ಲವೆಂದು 750 ಮೀರದಂತೆ ಮತ್ತಷ್ಟು ಜನರಿಗೆ ಮತದಾನ ಹಕ್ಕು ನೀಡಿ ಚುನಾವಣೆ ನಡೆಸಿ ಆದರೆ ಜೂ. 26 ರಂದು ನ್ಯಾಯಾಲಯದ ಅಂತಿಮ ತೀರ್ಪು ಹೊರಬರುವವರೆಗೆ ಫಲಿತಾಂಶ ಪ್ರಕಟಿಸಬಾರದೆಂದು ಆದೇಶ ಹೊರಡಿಸಿತ್ತು. ಅದರಂತೆ 281 ಮತದಾನ ಹೊರತು ಪಡಿಸಿ ಹೆಚ್ಚುವರಿ ಮತದಾರರಿಂದ ಪ್ರತ್ಯೇಕ ಮತಗಟ್ಟೆಯಲ್ಲಿ ಮತದಾನ ಮಾಡಿಸಲಾಗಿತ್ತು. ಚುನಾವಣೆ ನಡೆದರೂ ಕೂಡ ಮತ ಎಣಿಕೆ ಮಾಡದೆ ಹೈಕೋರ್ಟ್ ಆದೇಶದಂತೆ ಮತಪೆಟ್ಟಿಗೆಯನ್ನು ಭದ್ರವಾಗಿ ಇರಿಸಲಾಗಿತ್ತು. ಉಚ್ಚನ್ಯಾಯಾಲಯದ ಆದೇಶದಂತೆ ಶುಕ್ರವಾರ ಭಾರಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮತ ಏಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು. ಸಹಕಾರಿ ಇಲಾಖೆ ಅಧಿಕಾರಿ ಶಕ್ತಿಪ್ರಸಾದ ಜಂಬಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ತಾಲೂಕಿನ ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ ಬಣದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪಾಟೀಲರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು